ಬಾಗಲಕೋಟೆ: ಕೇವಲ 2 ವರ್ಷ ಇರುವ ಈ ಪುಟ್ಟ ಹೆಣ್ಣು ಮಗು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸಾಧಕಿ ಎಂದು ಹೆಸರು ಗಳಿಸಿದ್ದು, ಎಲ್ಲರ ಹುಬ್ಬೇರೆಸುವಂತೆ ಮಾಡಿದ್ದಾಳೆ. ಅರೆ, ಇಷ್ಟು ಚಿಕ್ಕವಯಸ್ಸಿನಲ್ಲೇ ಏನು ಸಾಧನೆ ಮಾಡಿದ್ದಾಳೆ ಎಂದು ಆಶ್ಚರ್ಯವೇ.. ಸಂಪೂರ್ಣ ವಿವರ ಇಲ್ಲಿದೆ ನೋಡಿ..
ಬಾಗಲಕೋಟೆ ಮೂಲದ ಸುಪ್ರೀತ್ ಮಾಶಾಳಕರ್ ಹಾಗೂ ಶ್ರಾವ್ಯ ಮಾಶಾಳಕರ ಮಗಳಾದ ಸ್ವರಂಶಿಗೆ ಈಗ ಎರಡು ವರ್ಷ ಪೂರ್ಣಗೊಂಡಿದೆ. ಸದ್ಯ ಇವರ ಕುಟುಂಬ ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ವಾಸ ಮಾಡುತ್ತಿದ್ದಾರೆ. ಈ ಮಗು ಮಾಡಿರುವ ಸಾಧನೆ ಅಂದರೆ, 15 ಕಂಪನಿಯ ಕಾರಿನ ಹೆಸರು, 10 ಪ್ರಾಣಿಗಳ ಹೆಸರು ಜೊತೆಗೆ 9 ಆಕಾರಗಳನ್ನು ಬಿಡಿಸಿರುವ ಚಿತ್ರಗಳ ಜೋಡಣೆ ಮಾಡುತ್ತಾಳೆ.
ಅಷ್ಟೇ ಅಲ್ಲ ದೇಹದ 18 ಭಾಗಗಳು, 11 ಪಕ್ಷಿಗಳು, 8 ಗ್ರಹಗಳು, 14 ಕ್ರಿಯಾಶೀಲ ಪದಗಳು, 7 ಕೀಟಗಳು, 11 ಬಣ್ಣಗಳು ಮತ್ತು 10 ಹಣ್ಣುಗಳು, 10 ತರಕಾರಿಗಳು, 1 ರಿಂದ 25ರ ವರೆಗೆ ಎಣಿಕೆ, 11 ಇಂಗ್ಲಿಷ್ ನರ್ಸರಿ ರೈಮ್‌ಗಳನ್ನು ಪಠಿಸುವುದು, 3 ಜಿಗ್ಸಾ ಒಗಟುಗಳನ್ನು ಪರಿಹರಿಸುವುದು ಮತ್ತು 10 ಪ್ರಾಣಿಗಳ ಶಬ್ಧಗಳನ್ನು ಗುರುತಿಸಿ ಅದೇ ರೀತಿಯಾಗಿ ಧ್ವನಿ ಮಾಡುತ್ತಾಳೆ.
ಕೇವಲ 2 ವರ್ಷ 1 ತಿಂಗಳ ವಯಸ್ಸಿನಲ್ಲಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸಾಧಕಿ' ಎಂದು ಹೆಸರು ಗಳಿಸಿದ್ದಾಳೆ ಈ ಬಾಲಕಿ. 2 ವರ್ಷ ಇರುವುದರಿಂದ ನರ್ಸರಿ ಶಾಲೆಗೆ ಹೋಗದೇ ಮನೆಯಲ್ಲಿ ಇದ್ದುಕೊಂಡು ಸಹೋದರರ ಜೊತೆಗೆ ಆಟ ಆಡುತ್ತಾ ಇಂತಹ ಜ್ಞಾನ ಪಡೆದುಕೊಂಡಿದ್ದಾಳೆ. ಬಹಳ ಚುರುಕಾಗಿರುವ ಸ್ವರಂಶಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅಂದರೆ ಏನು ಅಂತ ತಿಳಿಯದ ವಯಸ್ಸಿನಲ್ಲಿಯೇ ಈ ಸಾಧನೆ ಮಾಡಿದ್ದಾಳೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಈ ಅದ್ಭುತ ಸಾಧನೆ ಮಾಡಿದ ಮಗುವಿನ ಅಪ್ಪ-ಅಮ್ಮ ಮತ್ತು ಕುಟುಂಬದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.