ಬೆಂಗಳೂರು: ಲೋಕಸಭೆ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಹೆಚ್ಚು ಮಹಿಳೆಯರಿಗೆ ಮಣೆ ಹಾಕಿವೆ. ಕಾಂಗ್ರೆಸ್ ಆರು ಮಹಿಳೆಯರನ್ನು ಕಣಕ್ಕೆ ಇಳಿಸಿದ್ದರೆ, ಬಿಜೆಪಿ ಇಬ್ಬರಿಗೆ ಟಿಕೆಟ್ ನೀಡಿದೆ. ಟಿಕೆಟ್ ಸಿಕ್ಕ ಖುಷಿಯಲ್ಲಿ ಮಹಿಳಾ ಅಭ್ಯರ್ಥಿಗಳು ಈಗಾಗಲೇ ಪ್ರಚಾರಕ್ಕಿಳಿದಿದ್ದು, ಚುನಾವಣೆಯಲ್ಲಿ ಎಷ್ಟು ಜನ ಕಮಾಲ್ ಮಾಡುತ್ತಾರೆ ಎಂಬ ಕುತೂಹಲಕ್ಕೆ ಜೂನ್ 4ರಂದು ಉತ್ತರ ಸಿಗಲಿದೆ.
1999ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಇಬ್ಬರು ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದನ್ನು ಹೊರತುಪಡಿಸಿದರೆ ಆ ನಂತರ ಕೇವಲ ಒಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. 1999ರ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಹಾಗೂ ಮಾರ್ಗರೇಟ್ ಆಳ್ವ ಅವರು ಕೆನರಾ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ರಾಜ್ಯವನ್ನು ಪ್ರತಿನಿಧಿಸಿದ್ದರು. ನಂತರದ ದಿನಗಳಲ್ಲಿ ರಾಜ್ಯದಿಂದ ಪ್ರತಿ ಚುನಾವಣೆಯಲ್ಲಿ ಒಬ್ಬರು ಮಹಿಳೆ ಮಾತ್ರ ಆಯ್ಕೆಯಾಗಿದ್ದರೆ, ಇನ್ನೂ ಕೆಲವು ಚುನಾವಣೆಯಲ್ಲಿ ಮಹಿಳೆಯರಿಗೆ ಟಿಕೆಟ್ ಸಿಕ್ಕಿರಲಿಲ್ಲ.
ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಸಂಸತ್ನ ಉಭಯ ಸದನಗಳಲ್ಲಿ ಅಂಗೀಕಾರ ಮಾಡಲಾಗಿದೆ. 2029ರ ಲೋಕಸಭೆ ಚುನಾವಣೆ ವೇಳೆಗೆ ಮಹಿಳಾ ಮೀಸಲಾತಿ ರಾಷ್ಟ್ರಾದ್ಯಂತ ಅನ್ವಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಹಿಳೆಯರಿಗೆ ಪ್ರಾಮುಖ್ಯತೆ ಕೊಟ್ಟಿದೆ. ಅದರಲ್ಲಿ ರಾಜ್ಯದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಇದ್ದು, 6 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿದೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದೆ. ಜೆಡಿಎಸ್ ಯಾವುದೇ ಕ್ಷೇತ್ರದಲ್ಲೂ ಮಹಿಳೆಯರಿಗೆ ಟಿಕೆಟ್ ನೀಡಿಲ್ಲ.
ಯಾವ ಕ್ಷೇತ್ರದಲ್ಲಿ ಮಹಿಳೆಯರಿಗೆ ಟಿಕೆಟ್?: ಕಾಂಗ್ರೆಸ್ನ ಮೊದಲ ಪಟ್ಟಿಯಲ್ಲಿ ಶಿವಮೊಗ್ಗ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಗೀತಾ ಶಿವರಾಜ್‍ಕುಮಾರ್ ಹೆಸರು ಘೋಷಣೆ ಆಗಿತ್ತು. ಎರಡನೇ ಪಟ್ಟಿಯಲ್ಲಿ ಬೆಂಗಳೂರು ದಕ್ಷಿಣದಿಂದ ಸೌಮ್ಯಾ ರೆಡ್ಡಿ, ದಾವಣಗೆರೆಯಿಂದ ಪ್ರಭಾ ಮಲ್ಲಿಕಾರ್ಜುನ, ಉತ್ತರ ಕನ್ನಡದಿಂದ ಅಂಜಲಿ ನಿಂಬಾಳ್ಕರ್, ಬಾಗಲಕೋಟೆಯಿಂದ ಸಂಯುಕ್ತಾ ಪಾಟೀಲ್ ಹಾಗೂ ಚಿಕ್ಕೋಡಿ ಕ್ಷೇತ್ರದಿಂದ ಪ್ರಿಯಾಂಕಾ ಜಾರಕಿಹೊಳಿಗೆ ಟಿಕೆಟ್ ಘೋಷಣೆಯಾಗಿದೆ.
ಬಿಜೆಪಿ ಮೊದಲ ಪಟ್ಟಿಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ದಾವಣಗೆರೆ ಕ್ಷೇತ್ರದಿಂದ ಜಿ.ಎಂ. ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡಲಾಗಿದೆ.
1996 ಮತ್ತು 1998ರ ಲೋಕಸಭಾ ಚುನಾವಣೆ ವೇಳೆ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮಹಿಳೆಯರಿಗೆ ಟಿಕೆಟ್ ನೀಡಿರಲಿಲ್ಲ. ಆದರೆ, 1999ರಲ್ಲಿ ಕಾಂಗ್ರೆಸ್ ಇಬ್ಬರಿಗೆ ಹಾಗೂ ಬಿಜೆಪಿ ಓರ್ವ ಮಹಿಳೆಗೆ ಟಿಕೆಟ್ ಕೊಟ್ಟಿತ್ತು. ದೇಶದ ಗಮನ ಸೆಳೆದಿದ್ದ ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ಧೆ ಮಾಡಿದ್ದರು. 2004 ರ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಮೂರು ಪಕ್ಷಗಳು ಮಹಿಳೆಯರಿಗೆ ಮಣೆ ಹಾಕಿರಲಿಲ್ಲ.
2009ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರ ಪುನರ್ ವಿಂಗಡಣೆಯಾದ ಪರಿಣಾಮ ಸಾಮಾನ್ಯ ಕ್ಷೇತ್ರವಾಗಿದ್ದ ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಬಿಜಾಪುರ ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿ ಬದಲಾದವು. ಬಳ್ಳಾರಿ ಸಾಮಾನ್ಯ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾದರೆ ವಿಜಾಪುರ, ಚಿತ್ರದುರ್ಗ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾದವು. ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ ಮಾಜಿ ಸಚಿವ ಹಾಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಸಹೋದರಿ ಜೆ.ಶಾಂತ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಗೆದ್ದಿದ್ದರು. ಬಳಿಕ 2014 ಮತ್ತು 2019ರಲ್ಲಿ ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಜಯ ಸಾಧಿಸಿದ್ದರು. ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳು ಸದ್ದು ಮಾಡುತ್ತಿದ್ದು, ಯಾರೆಲ್ಲ ವಿಜಯ ಮಾಲೆ ಧರಿಸಲಿದ್ದಾರೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಗೀತಾ ಶಿವರಾಜ್ಕುಮಾರ್ಗೆ ಸಿಕ್ತು ನಿರ್ಮಾಪಕರ ಬೆಂಬಲ: ಗೀತಾಗೆ ಸಾಥ್ ಕೊಡುತ್ತೇವೆ ಎಂದ ನಿರ್ಮಾಪಕರು