ಗಂಗಾವತಿ(ಕೊಪ್ಪಳ): ಕೌಟುಂಬಿಕ ಭಿನ್ನಾಭಿಪ್ರಾಯ, ಹಣಕಾಸು ಸಮಸ್ಯೆ, ಕುಡಿತ, ಸೋಮಾರಿತನ ಹೀಗೆ ನಾನಾ ಕಾರಣಕ್ಕೆ ಸಂಸಾರದಲ್ಲಿನ ಸಮಸ್ಯೆಯಿಂದ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ಏಳು ಜೋಡಿಗಳನ್ನು ನ್ಯಾಯಾಧೀಶರು, ಮರು ಹೊಂದಾಣಿಕೆ ಮಾಡಿ ಮತ್ತೆ ಒಂದು ಮಾಡಿದ್ದಾರೆ.
ಇಲ್ಲಿನ ನ್ಯಾಯಾಲಯಗಳ ಆವರಣದಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ನಾಲ್ಕು ನ್ಯಾಯಾಲಯದಲ್ಲಿನ ನ್ಯಾಯಾಧೀಶರು ಒಂದಾಗಿ ಆಪ್ತ ಸಮಾಲೋಚನೆ ಮಾಡುವ ಮೂಲಕ ಏಳು ಜೋಡಿಗಳ ಸಂಸಾರದಲ್ಲಿನ ಬಿರುಕುಗಳನ್ನು ಮನಸ್ತಾಪಗಳನ್ನು ಹೋಗಲಾಡಿಸಿದ್ದಾರೆ. ಪರಿಣಾಮ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ದಂಪತಿ ಮತ್ತೆ ಒಂದಾಗಿದ್ದಾರೆ. ನ್ಯಾಯಾಧೀಶರು, ವಕೀಲರು, ಸಾರ್ವಜನಿಕರ ಎದುರಲ್ಲಿ ಜೋಡಿಗಳು ಹೂವಿನ ಹಾರ ಬದಲಿಸಿಕೊಂಡು ಸಂಸಾರದ ಮತ್ತೊಂದು ಮಗ್ಗಲಿಗೆ ಹೆಜ್ಜೆ ಹಾಕಿದರು. ವಿಚ್ಛೇದನಕ್ಕಾಗಿ ಕೆಲ ಜೋಡಿ ಐದು ವರ್ಷದಿಂದ ಕಾಯುತ್ತಿದ್ದರು.
ಕಾರಟಗಿ ತಾಲೂಕಿನ ಚಳ್ಳೂರು ಕ್ಯಾಂಪಿನ ಆನಂದ್ ಬಾಬು-ಸತ್ಯವತಿ, ತೊಂಡಿಹಾಳ ಗ್ರಾಮದ ದುರ್ಗಾ-ಪರಶುರಾಮ, ಕನಕಗಿರಿ ತಾಲೂಕಿನ ಕಾಟಾಪುರದ ಕನಕಗೌಡ-ಪಾರ್ವತಮ್ಮ, ನವಲಿಯ ವೀರೇಶ-ಸಂಗೀತಾ, ಯತ್ನಟ್ಟಿಯ ಪಾರ್ವತಿ-ಕನಕರಾಯ, ಗೋಡಿನಾಳದ ಮಂಜುಳಾ-ಮೌನೇಶ, ನವಲಿ ತಾಂಡದ ಬುಜ್ಜಿಬಾಯಿ-ದಾನಪ್ಪ ಮತ್ತೆ ಒಂದಾದ ದಂಪತಿಗಳು.
"ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಒಟ್ಟು 8 ಜೋಡಿಗಳನ್ನು ಲೋಕ ಅದಾಲತ್ನಲ್ಲಿ ರಾಜೀ ಸಂಧಾನ ಮಾಡುವ ಮೂಲಕ ಒಂದು ಮಾಡುವ ಉದ್ದೇಶವಿತ್ತು. ಆದರೆ ಅಂಬಿಕಾ-ಚೇತನಕುಮಾರ ಎಂಬ ಜೋಡಿ ಕಾರಣಾಂತರದಿಂದ ದೂರ ಉಳಿಯಿತು. ಮುಂದಿನ ಲೋಕದಾಲತ್ನಲ್ಲಿ ಮತ್ತಷ್ಟು ಜೋಡಿಗಳನ್ನು ಒಂದು ಮಾಡುತ್ತೇವೆ" ಎಂದು ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮುಸಾಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಪ್ರಭಾರಿ ಪ್ರಧಾನ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ ಭಾಗಿಯಾಗಿದ್ದರು.
1,042 ಪ್ರಕರಣ ಇತ್ಯರ್ಥ: ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ಕರ, ಕೌಟಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್, ಜನನ ಮರಣ, ಕ್ರಿಮಿನಲ್ ಕೇಸ್ ಸೇರಿ ಗಂಗಾವತಿಯ ನಾಲ್ಕು ನ್ಯಾಯಾಲಯಗಳಲ್ಲಿ ಒಟ್ಟು 9,079 ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ 1494 ಪ್ರಕಣಗಳನ್ನು ರಾಜೀ ಸಂಧಾನಕ್ಕೆ ಆಹ್ವಾನಿಸಲಾಗಿತ್ತು. ಇದರಲ್ಲಿ 1,042 ಪ್ರಕರಣ ಇತ್ಯರ್ಥ ಮಾಡುವಲ್ಲಿ ನ್ಯಾಯಾಧೀಶರು ಯಶಸ್ವಿಯಾಗಿದ್ದಾರೆ. ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಒಟ್ಟು 26 ಪ್ರಕರಣ, ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೋಟಾರು ವಾಹನ 51, ವೈವಾಹಿಕ ಪ್ರಕರಣ 8, ಬ್ಯಾಂಕ್ ಪ್ರಕರಣ 34, ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 14 ಚೆಕ್ ಬೌನ್ಸ್, 01 ಕೌಟಂಬಿಕ ದೌರ್ಜನ್ಯ, ಜನನ ಮರಣ 442, ಕ್ರಿಮಿನಲ್ ಕೇಸ್ 5 ಇತ್ಯರ್ಥ ಮಾಡಲಾಯಿತು.
ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 7 ಚೆಕ್ ಬೌನ್ಸ್, ಕೌಟಂಬಿಕ ಪ್ರಕರಣ 79, ಜನನ ಮರಣ 222, ಕ್ರಿಮಿನಲ್ ಕೇಸ್ 222 ಇನ್ನಿತರ 13 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು. ಇತ್ಯರ್ಥ ಮಾಡಲಾದ ಪ್ರಕರಣಗಳ ಒಟ್ಟು ಮೌಲ್ಯ 7.09 ಕೋಟಿ ಎಂದು ಕೋರ್ಟ್ ಸಿಬ್ಬಂದಿ ತಿಳಿಸಿದ್ದಾರೆ.
ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 7 ಚೆಕ್ ಬೌನ್ಸ್, ಕೌಟುಂಬಿಕ ಪ್ರಕರಣ 79, ಜನನ ಮರಣ 222, ಕ್ರಿಮಿನಲ್ ಕೇಸ್ 222 ಇನ್ನಿತರ 13 ಪ್ರಕರಣಗಳು ಇತ್ಯರ್ಥ ಮಾಡಲಾಯಿತು. ಇತ್ಯರ್ಥ ಮಾಡಲಾದ ಪ್ರಕರಣಗಳ ಒಟ್ಟು ಮೌಲ್ಯ 7.09 ಕೋಟಿ ಎಂದು ಕೋರ್ಟ್ ಸಿಬ್ಬಂದಿ ಹೇಳಿದ್ದಾರೆ.