ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಪ್ರತಿ ವರ್ಷವೂ ಭಾರೀ ಮಳೆಯಾಗುತ್ತದೆ. ಕಡಲ ತೀರದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವರ್ಷಂಪ್ರತಿ ಅಬ್ಬರದ ಮಳೆಯಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈವರೆಗೆ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿಯೇ 500 ಎಂಎಂ ಮಳೆ ಜಾಸ್ತಿಯಾಗಿದೆ.
ಜಿಲ್ಲೆಯಲ್ಲಿ ಪ್ರತಿವರ್ಷವೂ ಮಳೆಯ ಪ್ರಮಾಣ ಅಧಿಕ. ಕಳೆದ ವರ್ಷ ರಾಜ್ಯದಲ್ಲಿ ಬರ ಕಾಣಿಸಿಕೊಂಡಿದ್ದರೂ ಜಿಲ್ಲೆಯಲ್ಲಿ ತಕ್ಕ ಮಟ್ಟಿನ ಮಳೆಯಾಗಿತ್ತು. 2023ರಲ್ಲಿ ಜುಲೈವರೆಗೆ 1,486 ಎಂಎಂ ಮಳೆಯಾಗಿತ್ತು. ಆದರೆ, ಈ ಬಾರಿ ಈವರೆಗೆ 1,931 ಎಂಎಂ ಮಳೆಯಾಗಿದೆ. ಇದರ ಪ್ರಕಾರ 495 ಎಂಎಂ ಮಳೆ ಜಾಸ್ತಿಯಾಗಿದೆ. ಇನ್ನು ಉಡುಪಿಯಲ್ಲಿ 2023ರ ಜುಲೈವರೆಗೆ 1548 ಎಂಎಂ ಮಳೆಯಾಗಿತ್ತು. ಈ ಬಾರಿ 2,217 ಎಂಎಂ ಮಳೆ ಬಿದ್ದಿದೆ.
9 ಸಾವು, ಅಪಾರ ನಷ್ಟ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಮಳೆಗೆ 9 ಸಾವು ಸಂಭವಿಸಿದೆ. ಕರಾವಳಿ ಭಾಗದಲ್ಲಿ ಗುಡ್ಡ ಕುಸಿತದಂತಹ ಪ್ರಕರಣಗಳು ಹೆಚ್ಚಿರುವುದರಿಂದ ಸಾವು, ನೋವುಗಳು ವರದಿಯಾಗುತ್ತಿವೆ. ಮಳೆ ಆರಂಭದಲ್ಲಿಯೇ 9 ಸಾವು ಸಂಭವಿಸಿತ್ತು. 11 ಮಂದಿ ಗಾಯಗೊಂಡಿದ್ದರು. 10 ಮನೆಗಳು ಸಂಪೂರ್ಣ ಹಾನಿಯಾಗಿದ್ದರೆ, 349 ಮನೆಗಳು ಭಾಗಶ ಹಾನಿಯಾಗಿದೆ. ಒಟ್ಟು 7 ಪ್ರಾಣಿಗಳು ಸಾವನ್ನಪ್ಪಿದೆ. ಮಂಗಳೂರು ಮತ್ತು ಕಡಬ ತಾಲೂಕಿನಲ್ಲಿ ತಲಾ ಒಂದು ಕಡೆ ಪರಿಹಾರ ಕೇಂದ್ರ ತೆರೆಯಲಾಗಿದೆ.
ಎಸ್ಡಿಆರ್ಎಫ್, ಎನ್ಡಿಆರ್ಎಫ್ ಸನ್ನದ್ಧ: ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಾಗ ಹಾನಿ ಸಂಭವಿಸುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ 25 ಎಸ್ಡಿಆರ್ಎಫ್, 30 ಎನ್ಡಿಆರ್ಎಫ್ ತಂಡ ಮತ್ತು 25 ಬೋಟ್ಗಳನ್ನು ಸನ್ನದ್ಧವಾಗಿರಿಸಲಾಗಿದೆ. ನೇತ್ರಾವತಿ ನದಿಗೆ ಕಟ್ಟಲಾದ ಎರಡು ಅಣೆಕಟ್ಟಿನಲ್ಲಿ ಎಎಂಆರ್ ಡ್ಯಾಮ್ನಲ್ಲಿ ಗರಿಷ್ಠ ಎತ್ತರ 18.90 ಮೀಟರ್ ನೀರು ತುಂಬಿದೆ. ತುಂಬೆ ಡ್ಯಾಮ್ನಲ್ಲಿ ಗರಿಷ್ಠ ಎತ್ತರ 6 ಮೀಟರ್ ಆಗಿದ್ದು, ಸದ್ಯ 5.10 ಮೀಟರ್ ನೀರಿದೆ. ತುಂಬೆ ಡ್ಯಾಮ್ ನ 24 ಗೇಟ್ಗಳನ್ನು ತೆರೆಯಲಾಗಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ 29.0 ಆಗಿದ್ದು, ಸದ್ಯ 29.1 ಮೀಟರ್ ನೀರಿದೆ.
ಇದನ್ನೂ ಓದಿ: 5ನೇ ದಿನವೂ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ; ಹಲವೆಡೆ ರಸ್ತೆ ಸಂಚಾರ ಬಂದ್ - Kukke Subramanya