ದೊಡ್ಡಬಳ್ಳಾಪುರ: ಮನೆಯ ಒಡವೆಗಳನ್ನು ಅಡವಿಟ್ಟು, 5 ಲಕ್ಷ ರೂಪಾಯಿ ಖರ್ಚು ಮಾಡಿ ಅಡಕೆ ತೋಟವನ್ನು ಮಾಡಲಾಗಿತ್ತು. 1 ಕಿ.ಮೀ ದೂರದಿಂದ ನೀರಿನ ಪೈಪ್ ಮೂಲಕ ತೋಟಕ್ಕೆ ನೀರು ಹರಿಸಲಾಗುತ್ತಿತ್ತು, ಆದರೆ, ಹಳೇ ದ್ವೇಷಕ್ಕೆ ಅಡಕೆ ತೋಟ ಬಲಿಯಾಗಿದೆ, ನಕಾಶೆ ರಸ್ತೆಗಾಗಿ ನಡೆದ ಎರಡು ಕುಟುಂಬಗಳ ನಡುವಿನ ದ್ವೇಷಕ್ಕೆ 50 ಅಡಕೆ ಗಿಡಗಳನ್ನು ಕಡಿದು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಗಾಣದಾಳ ಗ್ರಾಮದಲ್ಲಿ ಏಪ್ರಿಲ್ 29ರ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಶಿವಶಂಕರ್ ಎಂಬುವರಿಗೆ ಸೇರಿದ 50ಕ್ಕೂ ಅಡಕೆ ಗಿಡಗಳನ್ನ ಕತ್ತರಿಸಿ ಹಾಕಲಾಗಿದೆ. ಗಾಣದಾಳ ಗ್ರಾಮದ ಸರ್ವೇ ನಂ.8/1ರ 29 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ನಕಾಶೆ ರಸ್ತೆಗಾಗಿ ಶಿವಶಂಕರ್ ಮತ್ತು ಅದೇ ಗ್ರಾಮದ ಮಂಜುನಾಥ ಕುಟುಂಬದ ಮಧ್ಯೆ ಜಗಳ ನಡೆದಿತ್ತು. ನಕಾಶೆಯಲ್ಲಿದ್ದಂತೆ ಗ್ರಾ.ಪಂ ವತಿಯಿಂದ ಶಿವಶಂಕರ್ ರಸ್ತೆ ಮಾಡಿಸಿಕೊಂಡಿದ್ದರು. ಇದೇ ದ್ವೇಷಕ್ಕೆ ಎರಡು ವರ್ಷದ ಅಡಕೆ ಗಿಡಗಳನ್ನ ಕತ್ತರಿ ಹಾಕಿದ್ದಾರೆ ಎಂಬುದು ಶಿವಶಂಕರ್ ಅವರ ಆರೋಪವಾಗಿದೆ.
ಕಷ್ಟಪಟ್ಟು ಬೆಳೆದ ಆಡಕೆ ಗಿಡಗಳನ್ನು ಕತ್ತರಿಸಿ ಹಾಕಿರೋದನ್ನು ನೋಡಿ ಕಣ್ಣೀರು ಹಾಕುತ್ತಿರುವ ಶಿವಶಂಕರ್ ಅವರ ತಾಯಿ ನರಸಮ್ಮ , ವಡವೆ ಅಡವಿಟ್ಟು ಐದು ಲಕ್ಷ ಸಾಲ ತಂದು ಅಡಕೆ ಬೆಳೆ ಬೆಳೆದಿದ್ದೆವು. ನಮ್ಮ ಮಧ್ಯೆ ಏನೇ ಭಿನ್ನಾಭಿಪ್ರಾಯ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ಜೀವನಕ್ಕೆ ಆಧಾರವಾಗಿದ್ದ ಅಡಕೆ ಸಸಿಗಳನ್ನೇ ಕತ್ತರಿಸಿ ಹಾಳು ಮಾಡಿದ್ದಾರೆ. ನಮಗೆ ನ್ಯಾಯದ ಜೊತೆ ರಕ್ಷಣೆ ಬೇಕು ಎಂದು ಅಳಲು ತೋಡಿಕೊಂಡರು.
ಇದನ್ನೂ ಓದಿ: ಚಿಕ್ಕಮಗಳೂರು: ಜಾತ್ರೆಗೆಂದು ಊರಿಗೆ ಬಂದ ಪತ್ನಿಯನ್ನು ಹೊಡೆದು ಕೊಂದ ಪತಿ - Husband Kills Wife