ಬೆಂಗಳೂರು: ಅಜ್ಜಿ-ಮೊಮ್ಮಗಳ ಪ್ರಯಾಣ ಉಚಿತ. ಆದರೆ ಅವರ ಜೊತೆಗೆ ತಂದಿರುವ ನಾಲ್ಕು ಲವ್‌ಬರ್ಡ್ಸ್ (ಗಿಳಿಗಳು)ಗಳಿಗೆ ಬರೋಬ್ಬರಿ 444 ರೂಪಾಯಿ ಟಿಕೆಟ್ ದರ. ಇದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಂಡುಬಂದ ವಿದ್ಯಮಾನ. ಹೌದು, ಬೆಂಗಳೂರಿನಿಂದ ಮೈಸೂರಿಗೆ ಗಿಳಿಗಳನ್ನು ಬಸ್‌ನಲ್ಲಿ ತೆಗೆದುಕೊಂಡು ಹೋಗಿದ್ದಕ್ಕೆ ವಿಧಿಸಿದ ಟಿಕೆಟ್ ದರ ಇದೀಗ ಗಮನ ಸೆಳೆಯುತ್ತಿದೆ.
ಅಜ್ಜಿ ಮತ್ತು ಚಿಕ್ಕ ಬಾಲಕಿ ಲವ್ಬರ್ಡ್ಸ್ಗಳನ್ನು ಖರೀದಿಸಿ ಬುಧವಾರ ಬೆಳಗ್ಗೆ 8 ಗಂಟೆಗೆ ಮೈಸೂರಿಗೆ ಪ್ರಯಾಣಿಸಿದ್ದಾರೆ. ಇಬ್ಬರಿಗೆ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ನೀಡಿದ್ದಾರೆ. ಆದರೆ, ನಾಲ್ಕು ಗಿಳಿಗಳಿಗೆ ಒಂದಕ್ಕೆ 111 ರೂಪಾಯಿಯಂತೆ 444 ರೂಪಾಯಿ ದರದ ಟಿಕೆಟ್ ನೀಡಿದ್ದಾರೆ.
ಗಮನ ಸೆಳೆದ ಟಿಕೆಟ್ ದರ: ಅಜ್ಜಿ ಮತ್ತು ಮೊಮ್ಮಗಳು ಬಸ್‌ನಲ್ಲಿ ತಾವು ಕೂತಿದ್ದ ಸೀಟಿನ ಮಧ್ಯದಲ್ಲಿ ಲವ್ಬರ್ಡ್ಸ್ಗಳನ್ನು ಇಟ್ಟುಕೊಂಡು ಕುಳಿತಿರುವ ದೃಶ್ಯವನ್ನೂ ಸಹ ಪ್ರಯಾಣಿಕರು ಮೊಬೈಲ್ನಲ್ಲಿ ಸೆರೆಹಿಡಿದು ಹಂಚಿಕೊಂಡಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ ಟಿಕೆಟ್ ದರ ಎಲ್ಲರ ಗಮನ ಸೆಳೆದಿದೆ.
ಅಜ್ಜಿ ಮತ್ತು ಮೊಮ್ಮಗಳನ್ನು ವಯಸ್ಕರೆಂದು ಪರಿಗಣಿಸಿ ಶಕ್ತಿ ಯೋಜನೆಯಲ್ಲಿ ಉಚಿತ ಪ್ರಯಾಣದ ಟಿಕೆಟ್ ಕಂಡಕ್ಟರ್ ನೀಡಿದ್ದಾರೆ. ಇನ್ನೊಂದು ಟಿಕೆಟ್ನಲ್ಲಿ ಲವ್ಬರ್ಡ್ಸ್ಗಳನ್ನು 'ಮಕ್ಕಳು' ಎಂದು ಪರಿಗಣಿಸಿ 444 ರೂಪಾಯಿ ಟಿಕೆಟ್ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ನಿಯಮಗಳ ಪ್ರಕಾರ, ಪ್ರಯಾಣಿಕರು ತಮ್ಮೊಂದಿಗೆ ಕರೆದೊಯ್ಯುವ ಸಾಕು ಪ್ರಾಣಿ, ಪಕ್ಷಿಗಳಿಗೆ ಅರ್ಧ ಟಿಕೆಟ್ ಖರೀದಿಸಬೇಕು. ಈ ರೀತಿ ಟಿಕೆಟ್ ಪಡೆಯದೆ ಇದ್ದರೆ ಪ್ರಯಾಣಿಕರಿಗೆ ಅವರ ಪ್ರಯಾಣದ ಟಿಕೆಟ್ ದರದ ಮೇಲೆ ಶೇಕಡಾ 10ರಷ್ಟು ದಂಡ ವಿಧಿಸುವುದಕ್ಕೆ ಅವಕಾಶ ಇದೆ.
ಒಂದು ವೇಳೆ ಕಂಡಕ್ಟರ್ ಅರ್ಧ ಟಿಕೆಟ್ ನೀಡದೇ ಇದ್ದರೆ ಕೆಎಸ್‌ಆರ್‌ಟಿಸಿ ಹಣ ದುರುಪಯೋಗ ಮಾಡಿಕೊಂಡ ಕಾರಣಕ್ಕೆ ಕ್ರಿಮಿನಲ್ ಕೇಸ್ ಹಾಕಿ ಕಂಡಕ್ಟರ್‌ನನ್ನು ಅಮಾನತುಗೊಳಿಸುವ ಅವಕಾಶ ಇದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಆಲಮಟ್ಟಿ ಹಿನ್ನೀರಿನಲ್ಲಿ ಹಕ್ಕಿಹಬ್ಬ: ನೂರಕ್ಕೂ ಹೆಚ್ಚು ಪಕ್ಷಿ ಪ್ರೇಮಿಗಳು ಭಾಗಿ