ರಾಯಚೂರು : ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ವೈಭವೋತ್ಸವ ಕೊನೆಯ ದಿನವಾದ ಇಂದು 429ನೇ ರಾಯರ ವರ್ಧಂತಿ ಮಹೋತ್ಸವ ಅದ್ದೂರಿಯಾಗಿ ನೇರವೇರುತ್ತಿದೆ. ತಿರುಪತಿ ತಿರುಮಲ ದೇವಸ್ಥಾನದಿಂದ ಬಂದ ಶೇಷ ವಸ್ತ್ರವನ್ನು ಸಂಪ್ರದಾಯದಂತೆ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥರು ಸ್ವೀಕರಿಸಿದರು. ನಂತರ ನೆರೆದ ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡಿದರು. ಅಲ್ಲದೇ ಅಭಿಷೇಕ, ಬಳಿಕ ಶೇಷ ವಸ್ತ್ರವನ್ನು ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಿದರು.
ರಾಘವೇಂದ್ರ ಸ್ವಾಮಿಗಳ ಜನ್ಮದಿನವಾದ ಇಂದು ಶ್ರೀಮಠದಲ್ಲಿ ವರ್ಧತಿ ಉತ್ಸವವನ್ನು ಆಚರಿಸಲಾಗುತ್ತದೆ. ಬೆಳಗ್ಗೆ ಮೂಲ ಬೃಂದಾವನ ವಿಶೇಷ ಪೂಜೆ - ಕೈಂಕರ್ಯಗಳು ನಡೆದವು. ವರ್ಧತಿ ಉತ್ಸವ ಹಿನ್ನೆಲೆಯಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮೂಲ ಬೃಂದಾವನಕ್ಕೆ ಹಾಲು, ಜೇನುತುಪ್ಪ, ಮೊಸರು, ಕಲ್ಲುಸಕ್ಕರೆ, ಗೋಡಂಬಿ ಸೇರಿದಂತೆ ಹಣ್ಣು- ಹಂಪಲಗಳಿಂದ ಅಭಿಷೇಕ ನೇರವೇರಿಸಿದರು. ಇದಾದ ಬಳಿಕ ಮೂಲ ಬೃಂದಾವನಕ್ಕೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಮೂಲ ರಾಮ ದೇವರ ಪೂಜೆ ಸಹಾ ನಡೆಯಿತು. ಇದಕ್ಕೂ ಮುನ್ನ ಶ್ರೀ ಮಠದ ಪ್ರಾಕಾರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ರಜತ ತೇರನ್ನು ಎಳೆಯಲಾಯಿತು.
ನಂತರ ಚೈನ್ಯ ಮೂಲದ ತಂಡದಿಂದ ನಾಂದಹಾರ ಕಾರ್ಯಕ್ರಮ ನಡೆಯಿತು. ಸಂಜೆ ವೇಳೆ ಮಠದ ಮುಂಭಾಗದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ವರ್ಧತಿ ಉತ್ಸವದ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಸೇರಿದಂತೆ ನಾನಾ ಭಾಗಗಳಿಂದ ಭಕ್ತರು ಆಗಮಿಸಿದರು.
ಇದನ್ನೂ ಓದಿ : ಮಂತ್ರಾಲಯದಲ್ಲಿ ಅದ್ಧೂರಿಯಾಗಿ ಜರುಗಿದ ಮೂಲ ರಾಮನ ಶೋಭಾಯಾತ್ರೆ: ವಿಡಿಯೋ