ಬೆಂಗಳೂರು: ರಾಜ್ಯಾದ್ಯಂತ ಸೆಪ್ಟಂಬರ್ 14ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ನ್ಯಾಯಾಲಯದಲ್ಲಿ ಬಾಕಿಯಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 35 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಇದರಲ್ಲಿ 1,669 ವೈವಾಹಿಕ ಪ್ರಕರಗಳು ಇತ್ಯರ್ಥಪಡಿಸಲಾಗಿದ್ದು, 248 ದಂಪತಿಗಳು ರಾಜಿ ಸಂದಾನದ ಮೂಲಕ ಮತ್ತೆ ಒಂದಾಗಿದ್ದಾರೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮಾಹಿತಿ ನೀಡಿದರು.
ಅದಾಲತ್ ಕುರಿತು ಕರೆದ ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಲೋಕ ಅದಾಲತ್ನಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಸೇರಿ ಮೂರು ಹೈಕೋರ್ಟ್ಗಳ 1008 ಪೀಠಗಳಲ್ಲಿ ಒಟ್ಟು 781 ಪ್ರಕರಣಗಳು ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ 2,00,083 ಮತ್ತು ವ್ಯಾಜ್ಯ ಪೂರ್ವ 33,84,347 ಪ್ರಕರಣಗಳೂ ಸೇರಿದಂತೆ 35,84,430 ಪ್ರಕರಣಗಳು ಇತ್ಯರ್ಥವಾಗಿವೆ. 2,402 ಕೋಟಿ ರೂ.ಗಳ ಪರಿಹಾರ ಕೊಡಿಸಲಾಗಿದೆ ಎಂದರು.
ಅಲ್ಲದೆ, 2,696 ವಿಭಾಗ ದಾವೆಗಳು, 3,621 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳು, 8,517 ಚೆಕ್ ಬೌನ್ಸ್ ಪ್ರಕರಣಗಳು, 389 ಎಲ್ಎಸಿ ಅಮಲ್ಜಾರಿ ಪ್ರಕರಣಗಳು, 623 ಎಂವಿಸಿ ಅಮಲ್ಜಾರಿ ಪ್ರಕರಣಗಳು ಹಾಗೂ ಇತರೆ 2,598 ಅಮಲ್ಜಾರಿ ಪ್ರಕರಣ ಇತ್ಯರ್ಥ ಪಡಿಸಿದ್ದು, 108 ಕೋಟಿ ರೂ. ಮೊತ್ತದ ಪರಿಹಾರ ನೀಡಲಾಗಿದೆ. 73 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದಾಗಿ ವಿವರಿಸಿದರು.
ಅದಾಲತ್ನಲ್ಲಿನ ವಿಶೇಷ ಪ್ರಕರಣಗಳು:
- ರಿಲಯನ್ಸ್ ಹೋಮ್ ಫೈನಾನ್ಸ್ ವಿರುದ್ಧ ಸೈಕಾನ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಪ್ರಕರಣದಲ್ಲಿ 20 ಕೋಟಿ ರೂ.ಗಳ ಪರಿಹಾರದೊಂದಿಗೆ ಇತ್ಯರ್ಥ.
- ಅಪರ್ಣ ರಾಮಕೃಷ್ಣ ವಿರುದ್ಧದ ರಾಯಲ್ ಸುಂದರಂ ವಿಮಾ ಕಂಪನಿ ಪ್ರಕರಣದಲ್ಲಿ 3.75 ಕೋಟಿ ರೂ.ಗಳಗೆ ಇತ್ಯರ್ಥ.
- ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ 26 ವರ್ಷಗಳಿಂದ ಬಾಕಿ ಉಳಿದಿದ್ದ ನಂಜಪ್ಪ ವಿರುದ್ಧದ ಅಕ್ರಂ ಪ್ರಕರಣದ ಇತ್ಯರ್ಥ.
- ಹಿರಿಯ ನಾಗರಿಕರು ವಿವಿಧ ಹಂತದಲ್ಲಿನ ಸುಮಾರು 1,365 ಪ್ರಕರಣಗಳು ಇತ್ಯರ್ಥ
- ಐದು ವರ್ಷಗಳಿಗೂ ಹೆಚ್ಚು ಹಳೆಯದಾದ 1,022 ಪ್ರಕರಣಗಳು, 10 ವರ್ಷಗಳಿಗೂ ಹಳೆಯದಾದ 277 ಪ್ರಕರಣಗಳು ಮತ್ತು 15 ವರ್ಷಗಳಿಗೂ ಹಳೆಯದಾದ 144 ಪ್ರಕರಣಗಳು ಸೇರಿ 1,443 ಪ್ರಕರಣಗಳು ಬಗೆಹರಿದಿವೆ.
ಡಿಸೆಂಬರ್ 14ಕ್ಕೆ ಮುಂದಿನ ಅದಾಲತ್: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ 2024ನೇ ಸಾಲಿನ ನಾಲ್ಕನೇ ಹಾಗೂ ಕೊನೆಯ ಲೋಕ ಅದಾಲತ್ನ್ನು ಡಿಸೆಂಬರ್ 14ರಂದು ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಆಸ್ತಿ ತೆರಿಗೆ ರಿಯಾಯಿತಿ: ಕರ್ನಾಟಕ ಪುರಸಭೆ ಕಾಯ್ದೆಯ ಕಲಂ 103ರ ಅಡಿಯಲ್ಲಿ ಲೋಕ ಅದಾಲತ್ನಲ್ಲಿ ರಿಯಾಯಿತಿ ವಿಸ್ತರಣೆ ಮಾಡಿದ ಹಿನ್ನೆಲೆಯಲ್ಲಿ 5,95,892 ಪ್ರಕರಣಗಳಲ್ಲಿ ತೆರಿಗೆ ಪಾವತಿಯಾಗಿದ್ದು, 653 ಕೋಟಿ ರೂ. ಸರ್ಕಾರದ ಖಜಾನೆಗೆ ಜಮೆಯಾಗಿದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಮೈಸೂರು ದಸರಾ ಪೋಸ್ಟರ್ ಬಿಡುಗಡೆ: ನಾಡಹಬ್ಬದ ಯಶಸ್ಸಿಗೆ ಶ್ರಮಿಸಲು ಸಚಿವರ ಕರೆ - Dasara Poster Release