ಬೆಳಗಾವಿ: ಖಾನಾಪುರ ತಾಲೂಕಿನ ಬೀಡಿ-ಮಂಗ್ಯಾನಟ್ಟಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೆ ಮತ್ತೊಂದು ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರುಗಳ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ ಘಟನೆ ಯರಗಟ್ಟಿ ತಾಲ್ಲೂಕಿನ ಕುರಬಗಟ್ಟಿ ಕ್ರಾಸ್ ಬಳಿ ನಡೆದಿದೆ.
ಘಟನೆಯಲ್ಲಿ ಓರ್ವ ಮಹಿಳೆ, ಮಗು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪಡಗುಂದಿ ಗ್ರಾಮದ ಮುತ್ತು ಸತ್ಯಪ್ಪ ನಾಯ್ಕ (08), ಗೋಪಾಲ ಸತ್ಯಪ್ಪ ನಾಯ್ಕ (45), ಧಾರವಾಡ ಮೂಲದ ಅನ್ನಪೂರ್ಣ ಬಾಳೇಶ ಶಿರೋಳ(53) ಮೃತ ದುರ್ದೈವಿಗಳು. ಸ್ವಿಫ್ಟ್ ಮತ್ತು ಅಲ್ಟೋ ಕಾರುಗಳ ರಸ್ತೆ ಅಪಘಾತ ಸಂಭವಿಸಿದೆ. ಸ್ವಿಪ್ಟ್ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿನ್ನೆಯೂ ನಡೆದಿದ್ದ ಅಪಘಾತ: ನಿನ್ನೆಯೂ ಭೀಕರ ರಸ್ತೆ ಅಪಘಾತ ಸಂಭವಿಸಿ ಆರು ಜನ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದ ದಾರುಣ ಘಟನೆ ಖಾನಾಪುರ ತಾಲೂಕಿನ ಮಂಗ್ಯಾನಕೊಪ್ಪ ಹಾಗೂ ಬೀಡಿ ಗ್ರಾಮದ ಮಧ್ಯೆ ಸಂಭವಿಸಿತ್ತು. ಮೃತರು ಧಾರವಾಡ ನಗರದ ಲಂಗೋಟಿ ಗಲ್ಲಿ ನಿವಾಸಿಗಳು ಎಂದು ತಿಳಿದು ಬಂದಿತ್ತು.
ಕಾರಿನಲ್ಲಿ ಕಿತ್ತೂರು ಕಡೆಯಿಂದ ಖಾನಾಪುರ ತಾಲೂಕಿನ ಗೋಲಿಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಮದುವೆಗೆ ಈ ಕುಟುಂಬಸ್ಥರು ಹೊರಟಿದ್ದರು. ಆದರೆ ಚಾಲಕನ ನಿಯಂತ್ರಣ ತಪ್ಪಿ ಕಾರು ನೇರವಾಗಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಕಾರು ಚಾಲಕ ಮತ್ತು ಇನ್ನೊಬ್ಬನ ದೇಹಗಳು ಛಿದ್ರಗೊಂಡಿದ್ದವು. ವಾಹನ ಸಂಪೂರ್ಣ ನಜ್ಜುಗುಜ್ಜಾಗಿತ್ತು.
ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸರು, ಕಾರಿನಿಂದ ಮೃತದೇಹಗಳನ್ನು ಹೊರ ತೆಗೆದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಇದನ್ನೂ ಓದಿ: ಬೆಳಗಾವಿ : ಮರಕ್ಕೆ ಕಾರು ಡಿಕ್ಕಿ, ಆರು ಮಂದಿ ದುರ್ಮರಣ