ಬೆಂಗಳೂರು: "ರಾಜ್ಯಪಾಲರು ವಿವಿಧ ವಿಚಾರಗಳ ಬಗ್ಗೆ ಮಾಹಿತಿ ಕೇಳಿ ಇಲಾಖಾ ಕಾರ್ಯದರ್ಶಿಗಳಿಗೆ 20 ಪತ್ರಗಳನ್ನು ಬರೆದಿದ್ದಾರೆ" ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, "ಬಿಸ್ನೆಸ್ ಕೋಡ್ ಆಫ್ ಕಂಡಕ್ಟ್ ಬಗ್ಗೆ ಅವರಿಗೆ ಅರಿವಿದೆಯಾ? ಅವರು ರಾಜ್ಯಪಾಲ ಕಚೇರಿಯ ಘನತೆ, ಗೌರವ ಕಾಪಾಡಬೇಕು. ಅವರ ಕಚೇರಿಯಿಂದ ಮಾಹಿತಿ ಸೋರಿಕೆ ಆಗುತ್ತಿದೆ. ಆದರೆ, ನಮ್ಮ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ಸಿಎಂ ವಿಚಾರದಲ್ಲಿ 12 ತಾಸಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಬಿಜೆಪಿಗೆ ಸಂಬಂಧ ಪಟ್ಟ ಅರ್ಜಿ ಬಗ್ಗೆ ಸುಮ್ಮನೆ ಕೂತಿದ್ದಾರೆ. ಚಲವಾದಿ ನಾರಾಯಣಸ್ವಾಮಿ ವಿರುದ್ಧ ದೂರು ನೀಡಿದ್ದೇವೆ. ಕಾಂಗ್ರೆಸ್ ಎಂಎಲ್ಸಿಗಳೇ ರಾಜ್ಯಪಾಲರಿಗೆ ದೂರು ನೀಡಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ" ಎಂದು ವಾಗ್ದಾಳಿ ನಡೆಸಿದರು.
ಸಿಎಂ ಪತ್ನಿಯಿಂದ ಮುಡಾ 14 ನಿವೇಶನ ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸಿ, "ಇದು ಪರಿಹಾರಾತ್ಮಕ ಪರ್ಯಾಯ ನಿವೇಶನವಾಗಿದೆ. ಇದರಲ್ಲಿ ಅಕ್ರಮ ನಡೆದಿಲ್ಲ ಎಂದು ಹೇಳಿದ್ದೇವೆ. 14 ಸೈಟ್ ಪರಿಹಾರವಾಗಿ ಕೊಡಲಾಗಿದೆ. ಅದು ಕೇವಲ ಇವರಿಗೆ ಮಾತ್ರ ಕೊಟ್ಟಿಲ್ಲ. ಇತರರಿಗೂ ನಿವೇಶನಗಳನ್ನು ನೀಡಲಾಗಿದೆ. ಆದರೆ ಸಿಎಂ ಪತ್ನಿಗೆ ಸೇರಿದ 14 ಸೈಟ್ಗಳ ಬಗ್ಗೆಯೇ ಏಕೆ ಇಷ್ಟೊಂದು ಕಾಳಜಿ? ಅಕ್ರಮ ಎಲ್ಲಿ ನಡೆದಿದೆ ಎಂದು ಬಿಜೆಪಿಯವರು ಹೇಳಿಲ್ಲ. ಸೈಟ್ ವಾಪಸ್ ಮಾಡಿರುವುದರಲ್ಲಿ ತಪ್ಪೇನಿದೆ? ಮುಡಾದವರೇ ತಪ್ಪು ಒಪ್ಪಿಕೊಂಡಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದೆ" ಎಂದು ಆರೋಪಿಸಿದರು.
ನಾಗೇಂದ್ರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ: "ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಸಂಬಂಧ ನಾಗೇಂದ್ರ ಕೂಡ ಎಲ್ಲರ ಸಲಹೆ ಪಡೆದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಜೊತೆ ಚರ್ಚಿಸಿ ಅವರೇ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಇಲ್ಲಿ ರಾಜ್ಯಪಾಲರ ಕಚೇರಿ ದುರುಪಯೋಗ ಮಾಡಿ ಸಿಎಂರನ್ನು ಫಿಕ್ಸ್ ಮಾಡಲು ಹೊರಟಿದ್ದಾರೆ" ಎಂದು ಆರೋಪಿಸಿದರು.
ಚುನಾವಣೆ ವೇಳೆ ದಾಳಿ ಹೆಚ್ಚಾಗ್ತವೆ ಎಂದು ವಾಗ್ದಾಳಿ: "2014ರಲ್ಲಿ 2024ವರೆಗೆ ಪಿಎಂಎಲ್ಎ ಕಾಯ್ದೆಯಡಿ ಇ.ಡಿ. 5,297 ಕೇಸ್ ದಾಖಲಿಸಿದೆ. ಆ ಪೈಕಿ 3 ಪ್ರಕರಣಗಳು ಖುಲಾಸೆ ಆಗಿದೆ. 40 ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪಾಗಿದೆ. ಈ ಪೈಕಿ 74 ಕೇಸ್ಗಳನ್ನು ಕಾಂಗ್ರೆಸ್ ನಾಯಕರ ಮೇಲೆ ಹಾಕಲಾಗಿದೆ. ಇವುಗಳಲ್ಲಿ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದ ಹಾಗೇ, ಸರ್ಕಾರ ಅಸ್ಥಿರಗೊಳಿಸಬೇಕಾದಾಗ ಇಡಿ ದಾಳಿ ಹೆಚ್ಚಾಗುತ್ತವೆ. ಬಿಜೆಪಿ ಸೇರಿದ ತಕ್ಷಣ ಕೇಸ್ ಇತ್ಯರ್ಥ ಆಗುತ್ತೆ. ಚುನಾವಣೆ ಸಮೀಪ ಇದ್ದಾಗ ದಾಳಿ ಮಾಡಲಾಗುತ್ತಿದೆ. ಅವರ ಆಟ ನಡೆಯಲ್ಲ. ಅವರ ಜೊತೆ ಐಟಿ, ಇಡಿ, ಸಿಬಿಐ ಇರಬಹುದು, ಪ್ರಧಾನಿ ಮೋದಿ ಇರಬಹುದು. ಆದರೆ, ನಮ್ಮ ಬಳಿ ಬಾಬ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಇದೆ" ಎಂದರು.
ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿ, "ಅವರು ಸೆಂಟ್ರಲ್ ಮಿನಿಸ್ಟರ್. ಅವರ ಘನತೆ ಏನು? ಅಧಿಕಾರಿಗೆ ಬಯ್ಯುವುದು ಏಕೆ? ಕೇಂದ್ರ ಸಚಿವರಾಗಿ ರಾಜ್ಯಪಾಲರನ್ನು ಏಕೆ ಅಷ್ಟು ಸಮರ್ಥಿಸಿಕೊಳ್ಳುತ್ತಿದ್ದಾರೆ? ರಾಜ್ಯಪಾಲರ ಕಚೇರಿಯಿಂದಲೇ ಕಡತಗಳು ಸೋರಿಕೆಯಾಗಿದೆ ಎಂಬುದು ನಮ್ಮ ಮಾಹಿತಿ. ಹೀಗಾಗಿ ಮೂಲದಿದಂಲೇ ತನಿಖೆಯಾಗಬೇಕಲ್ವಾ? ಎಲ್ಲವೂ ಗೊತ್ತಾಗಬೇಕು. ಅದಕ್ಕಾಗಿ ಎಡಿಜಿಪಿ ತನಿಖೆಗೆ ಅನುಮತಿ ಕೋರಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಕುಮಾರಸ್ವಾಮಿ ಮಾತನಾಡೋದನ್ನ ದೇವೇಗೌಡ್ರು ಸರಿ ಅಂದ್ರೆ ನಾನೂ ಒಪ್ಪುತ್ತೇನೆ: ಸಚಿವ ಎನ್.ಚಲುವರಾಯಸ್ವಾಮಿ - N CHALUVARAYASWAMY