ಮಂಗಳೂರು: ಏ.26 ರಂದು ನಡೆಯುವ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಇದ್ದು, ಇದರಲ್ಲಿ 171 ಸೂಕ್ಷ್ಮ ಮತಗಟ್ಟೆಗಳಿವೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 1,876 ಮತಗಟ್ಟೆಗಳಿವೆ. ಬೆಳ್ತಂಗಡಿ 38, ಮೂಡಬಿದಿರೆ 21, ಮಂಗಳೂರು ನಗರ ಉತ್ತರ 25, ಮಂಗಳೂರು ನಗರ ದಕ್ಷಿಣ 2, ಮಂಗಳೂರು 22, ಬಂಟ್ವಾಳ 7, ಪುತ್ತೂರು 18 ಮತ್ತು ಸುಳ್ಯ 38 ಕಡೆ ಸೂಕ್ಷ್ಮ ಮತಗಟ್ಟೆಗಳಿವೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ರಿಷ್ಯಂತ್ ಸಿ. ಬಿ. ಮಾತನಾಡಿ, "ದ.ಕ. ಪೊಲೀಸ್ ವ್ಯಾಪ್ತಿಯಲ್ಲಿ 1600 ಮಂದಿ ಸಿಬ್ಬಂದಿ, 3 ಕಂಪೆನಿ ಸಿಎಪಿಎಫ್, 9 ಪ್ಲಟೂನ್ ಕೆಎಸ್ ಆರ್ ಪಿ, 560 ಹೋಮ್ ಗಾರ್ಡ್ ನಿಯೋಜಿಸಲಾಗಿದೆ. ರೌಡಿ ಅಸಾಮಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಕ್ಸಲ್ ಪೀಡಿತ ಪ್ರದೇಶದ ಬೂತ್ಗಳಿಗೆ ಸಿಎಪಿಎಫ್ ದಳ ಹಾಕ್ತೇವೆ. ಆ ಪ್ರದೇಶದಲ್ಲಿ ಎಎನ್ಎಫ್ನವರು ಕೂಂಬಿಂಗ್ ಮಾಡುತ್ತಿದ್ದಾರೆ'' ಎಂದರು.
ಮಂಗಳೂರು ಮಹಾನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿ, ''ಮಂಗಳೂರಿನಲ್ಲಿ ಮುಂಜಾಗ್ರತಾ ಕ್ರಮವಾಗಿ 1,157 ಮಂದಿ ಮೇಲೆ ಕ್ರಮ ಜರುಗಿಸಲಾಗಿದೆ. 806 ಮಂದಿ ಮೇಲೆ ಬೌಂಡ್ ಓವರ್ ಮಾಡಲಾಗಿದೆ. 75 ಮಂದಿಯನ್ನು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ. 8 ಮಂದಿ ಮೇಲೆ ಗೂಂಡಾ ಕಾಯ್ದೆ ದಾಖಲಾಗಿದೆ. 4 ಮಂದಿ ಮೇಲೆ ಹೈಕೋರ್ಟ್ ಅಡ್ವೈಸರಿ ಕಮಿಟಿಯಿಂದ ಗೂಂಡಾ ಕಾಯ್ದೆ ಅಡಿ ಒಂದು ವರ್ಷದ ಅವಧಿಗೆ ಬಂಧನ ಮಾಡಲಾಗಿದೆ. ಮಂಗಳೂರು ನಗರದ ಒಟ್ಟು 42 ಕಡೆಗಳಲ್ಲಿ ಸಿಎಪಿಎಫ್ ತುಕಡಿ, ಸ್ಥಳೀಯ ಪೊಲೀಸ್ ನೊಂದಿಗೆ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ'' ಎಂದು ತಿಳಿಸಿದರು.
''ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 12 ಎಸ್ಎಸ್ಟಿ ಚೆಕ್ ಪೋಸ್ಟ್ ನಿಯೋಜನೆ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ನಂತರ ನಗರದಲ್ಲಿ ಒಟ್ಟು 22,24,489/- ನಗದು, 8,87,950 ಮೌಲ್ಯದ ಅಮಲು ಪದಾರ್ಥ ಸೇರಿ ಒಟ್ಟು ಮೂರು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಮಂಗಳೂರು ನಗರದಲ್ಲಿ ಚುನಾವಣಾ ಬಂದೋಸ್ತ್ಗಾಗಿ 46 ಪಿಎಸ್ಐ ಸೆಕ್ಟರ್ ಮೊಬೈಲ್ಗಳು, 14 ಪಿಐ ಸೂಪರ್ ವಿಷನ್ ಸೆಕ್ಟರ್ ಅಧಿಕಾರಿಗಳು, 4 ಎಸಿಪಿ ನೋಡಲ್ ಅಧಿಕಾರಿಗಳು, 1003 ಪೊಲೀಸ್ ಸಿಬ್ಬಂದಿ, 350 ಗೃಹ ರಕ್ಷಕ ಸಿಬ್ಬಂದಿ, 17 ಫಾರೆಸ್ಟ್ ಗಾರ್ಡ್ ನಿಯೋಜನೆ ಮಾಡಲಾಗಿದೆ. 36 ಕ್ರಿಟಿಕಲ್ ಮತಗಟ್ಟೆಗಳಿಗೆ ಕೇಂದ್ರೀಯ ಭದ್ರತಾ ಪಡೆ 16 ಎಎಸ್ಐ ನಿಯೋಜನೆ ಮಾಡಲಾಗಿದೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಪ್ರದೇಶದಲ್ಲಿ 3 ಪಿಐ, 21 ಪಿಎಸ್ಐ, 13 ಎಎಸ್ಐ, 42 ಪಿಸಿ, ಎಫ್ಜಿ ಸೇರಿ 80 ಮಂದಿ ನಿಯೋಜಿಸಲಾಗಿದೆ. ನಗರದಲ್ಲಿ 2 ಸಿಆಆರ್ಪಿಎಫ್, 1 ಕೆಎಸ್ಆರ್ಪಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ'' ಎಂದು ಪೊಲೀಸ್ ಆಯುಕ್ತರು ವಿವರಿಸಿದರು.
ಇದನ್ನೂ ಓದಿ: ಮಂಗಳೂರು: ಮತ ಚಲಾಯಿಸಲು ಬರುವವರು ಮೊಬೈಲ್ ತರುವಂತಿಲ್ಲ; ಚುನಾವಣಾಧಿಕಾರಿ - Mullai Mugilan