ಬೆಂಗಳೂರು: ಉತ್ತರಾಖಂಡದ ಸಹಸ್ತ್ರತಾಲ್ ಚಾರಣಕ್ಕೆ ತೆರಳಿ ಹವಮಾನ ವೈಪರಿತ್ಯದಿಂದ ಸಿಲುಕಿ ಬದುಕುಳಿದ 13 ಜನ ಚಾರಣಿಗರು ಗುರುವಾರ ರಾತ್ರಿ 9:30 ಸಮಯದಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
22 ಜನರ ಚಾರಣಿಗರ ತಂಡ ಉತ್ತರಾಖಂಡದ ಸಹಸ್ತ್ರತಾಲ್ ಟ್ರೆಕ್ಕಿಂಗ್ಗೆ ತೆರಳಿತ್ತು. ವಾಪಸ್ ಬರುವ ವೇಳೆ ಜೂನ್ 3 ರಂದು ಹವಾಮಾನ ವೈಪರಿತ್ಯದಿಂದ ಹಿಮಪಾತ ಸಂಭವಿಸಿ ದಾರಿ ಮಧ್ಯೆ ಸಿಲುಕಿ 9 ಮಂದಿ ಸಾವನ್ನಪ್ಪಿದ್ದರು. ಉಳಿದ 13 ಚಾರಣಿಗರನ್ನು ರಕ್ಷಣೆ ಮಾಡಲಾಗಿತ್ತು. ನಿನ್ನೆ ಅವರೆಲ್ಲ ಮರಳಿ ಊರಿಗೆ ಸೇರಿದ್ದಾರೆ.
ಘಟನೆ ಜೂನ್ 3ಕ್ಕೆ ನಡೆದು ರಾಜ್ಯ ಸರ್ಕಾರಕ್ಕೆ ಜೂನ್ 4 ರಂದು ಮಾಹಿತಿ ಸಿಕ್ಕಿತ್ತು. ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಕಂದಾಯ ಸಚಿವ ಕೃಷ್ಣಬೈರೇಗೌಡರು ರಕ್ಷಣಾ ಕಾರ್ಯಚರಣೆಯ ಉಸ್ತುವಾರಿ ತೆಗೆದುಕೊಂಡು ಡೆಹ್ರಾಡೂನ್ಗೆ ಪ್ರಯಾಣ ಬೆಳೆಸಿ, ಬದುಕಳಿದವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರುವ ಪ್ರಯತ್ನ ನಡೆಸಿದ್ದಾರೆ.
ರಕ್ಷಣೆಗೊಂಡ 13 ಚಾರಣಿಗರೊಂದಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೃಷ್ಣಬೈರೇಗೌಡರು ಮಾಧ್ಯಮದೊಂದಿಗೆ ಮಾತನಾಡಿದರು. "ಬೆಂಗಳೂರಿನ 22 ಚಾರಣಿಗರ ತಂಡ ಚಾರಣಕ್ಕೆ ಎಂದು ಉತ್ತರಾಖಂಡಕ್ಕೆ ತೆರಳಿದ್ದು, ಈ ವೇಳೆ ಹಿಮಪಾತ ಸಂಭವಿಸಿ 9 ಮಂದಿ ಚಾರಣಿಗರು ಸಾವನ್ನಪ್ಪಿದ್ದಾರೆ. ಹಿಮದ ನಡುವೆ ಸಿಲುಕಿದ 13 ಜನರನ್ನು ಹೆಲಿಕಾಪ್ಟರ್ ಮೂಲಕ ಡೆಹ್ರಾಡೂನ್ಗೆ ಸುರಕ್ಷಿತವಾಗಿ ಕರೆ ತರಲಾಯಿತು. ಅನಂತರ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. ಇಲ್ಲಿಂದ ಅವರ ಮನೆಗಳಿಗೆ ತಲುಪಿಸುವ ಕೆಲವನ್ನು ಸಹ ರಾಜ್ಯ ಸರ್ಕಾರ ಮಾಡಿದೆ"
"ಮೃತ ದೇಹಗಳನ್ನು ಉತ್ತರ ಕಾಶಿಗೆ ತರಲಾಗಿದ್ದು, ಅಲ್ಲಿಂದ ಡೆಹ್ರಾಡೂನ್ ಮತ್ತು ಅಲ್ಲಿಂದ ದೆಹಲಿ ಏರ್ ಪೋರ್ಟ್ಗೆ ತರಲಾಗಿದೆ. ಇಂದು ಬೆಳಗ್ಗೆ ಮೃತಪಟ್ಟವರ 9 ದೇಹಗಳು ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಬರಲಿದ್ದು, ಏರ್ಪೋರ್ಟ್ನಿಂದ ಆಂಬ್ಯುಲೆನ್ಸ್ ಮೂಲಕ ಮೃತರ ಕುಟುಂಬಗಳಿಗೆ ತಲುಪಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಿದೆ ಎಂದರು.