ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಶನಿವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಆ ಬಳಿಕ ಕಟ್ಟೆಚ್ಚರ ವಹಿಸಿರುವ ಬೆಂಗಳೂರು ಪೊಲೀಸರು ತಮ್ಮ ಬೇಟೆ ಆರಂಭಿಸಿದ್ದಾರೆ. ನಗರದಾದ್ಯಂತ ವಾಹನಗಳ ತಪಾಸಣೆ ಕಾರ್ಯ ನಡೆಯುತ್ತಿದೆ. ಈ ವೇಳೆ ಕಾರೊಂದರಲ್ಲಿ 13 ಲಕ್ಷ ರೂ ಹಣ ಪತ್ತೆಯಾಗಿದೆ.
ಈ ಹಣವನ್ನು ಅಶೋಕನಗರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಣಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಹಣ ಯಾರದ್ದು? ಎಲ್ಲಿಗೆ ಸಾಗಿಸಲಾಗುತ್ತಿತ್ತು? ಎಂಬುದರ ಕುರಿತು ಮಾಹಿತಿ ಕಲೆಹಾಕುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಮಾದರಿ ನೀತಿ ಸಂಹಿತೆ ಜಾರಿಯಾದರೆ ಏನೆಲ್ಲಾ ಆಗುತ್ತೆ?
ಬೆಳಗಾವಿಯಲ್ಲಿ 2 ಲಕ್ಷ ರೂ ವಶಕ್ಕೆ: ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಶನಿವಾರ ಮೂಡಲಗಿ ತಾಲೂಕಿನ ಹಳ್ಳೂರು ಚೆಕ್ಪೋಸ್ಟ್ನಲ್ಲಿ ಕಾರಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಲಕ್ಷ ರೂ. ನಗದು ಪತ್ತೆಯಾಗಿತ್ತು. ಪೊಲೀಸರು ನಗದು ವಶಕ್ಕೆ ಪಡೆದು, ನಾಲ್ವರು ಆರೋಪಿಗಳು ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಗೋಣಿ ಚೀಲದಲ್ಲಿ ಹಣ ಸಾಗಿಸಲಾಗುತ್ತಿತ್ತು. ಹಣದ ಕಟ್ಟುಗಳಿಗೆ ಕಪ್ಪು ಬಣ್ಣದ ಕವರ್ ಹಾಕಿ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಮಾದರಿ ನೀತಿ ಸಂಹಿತೆ ಜಾರಿ!
ನೀತಿಸಂಹಿತೆ ಪಾಲನೆಗೆ ಸೂಚನೆ: ಚುನಾವಣಾ ಆಯೋಗವು ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಿಸಿರುವುದರಿಂದ ತಕ್ಷಣದಿಂದಲೇ ಚುನಾವಣಾ ನೀತಿಸಂಹಿತೆ ಜಾರಿಗೆ ಬಂದಿದೆ. ದೇಶದಲ್ಲಿ ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇನ್ನು ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅನುಕೂಲವಾಗುವಂತೆ ಮಾದರಿ ನೀತಿಸಂಹಿತೆ ಪಾಲನೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಬೆಳಗಾವಿ ಜಿಲ್ಲೆಯಲ್ಲಿ 2 ಲಕ್ಷ ರೂ. ನಗದು ವಶಕ್ಕೆ