ಬೆಳಗಾವಿ: ಒಮ್ಮೆ ಬೆಳೆ ಬೆಳೆಯಬೇಕು ಎಂದರೆ ಮಳೆ ಇರೋದಿಲ್ಲ. ಒಂದೊಮ್ಮೆ ಮಳೆ ಬಂದರೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲ. ಇಂತಹ ಸಮಸ್ಯೆಗಳ ಸುಳಿಯು ಅನ್ನದಾತನನ್ನು ಸಾಲದ ಕೂಪಕ್ಕೆ ದೂಡುತ್ತಿದೆ ಮತ್ತು ಪಡೆದ ಸಾಲ ತೀರಿಸಲಾಗದೇ ಸಾಲದ ಶೂಲಕ್ಕೆ ಕೊರಳೊಡ್ಡುವಂತಾಗಿದೆ. ಹೀಗೆ ಕಳೆದ 15 ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ 122 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಭೀಕರ ಬರಗಾಲದ ಛಾಯೆ ಆವರಿಸಿದ್ದರಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಿದ್ದ ಸಾಲ ತೀರಿಸುವುದು ಒತ್ತಟ್ಟಿಗಿರಲಿ, ಕುಟುಂಬ ನಿರ್ವಹಣೆಗಾಗಿ ಖಾಸಗಿ ಲೇವಾದೇವಿಗಾರರಿಂದ ಪಡೆದ ಕೈಗಡ ಸಾಲ ರೈತರ ಜೀವಕ್ಕೆ ಕುತ್ತು ತರುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಸಾಲದ ಬಾಧೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಏರುತ್ತಲೇ ಇದೆ.
ಸದ್ಯದ ಅಂಕಿ - ಅಂಶಗಳ ಪ್ರಕಾರ, 2023ರ ಎಪ್ರಿಲ್ 1ರಿಂದ 2024ರ ಜುಲೈ 4ರೊಳಗೆ ಜಿಲ್ಲೆಯಲ್ಲಿ 122 ರೈತರು ಸಾವಿಗೆ ಶರಣಾಗಿದ್ದಾರೆ. ಇದು ರಾಜ್ಯದಲ್ಲೇ ಅತೀ ಹೆಚ್ಚು ರೈತರು ಆತ್ಮಹತ್ಯೆ ಪ್ರಕರಣವಾಗಿದೆ. ಇದರಲ್ಲಿ 98 ಪ್ರಕರಣಗಳಲ್ಲಿ ಮೃತ ರೈತರ ಕುಟುಂಬಗಳು ಪರಿಹಾರಕ್ಕೆ ಅರ್ಹವಾಗಿದ್ದು, ಇನ್ನುಳಿದ 24 ಪ್ರಕರಣಗಳು ಅರ್ಹ ಅಲ್ಲವೆಂದು ತಿರಸ್ಕರಿಸಲಾಗಿದೆ. ಹಾಗಾಗಿ, ಇವರ ಕುಟುಂಬಗಳಿಗೂ ಸರ್ಕಾರ ಪರಿಹಾರ ನೀಡುವಂತೆ ಆಗ್ರಹ ಕೇಳಿ ಬಂದಿದೆ.
ಇದನ್ನೂ ಓದಿ: ತೋಟಗಾರಿಕಾ ಬೆಳೆಯತ್ತ ಮುಖಮಾಡಿದ ರೈತ; ಪೇರಲ ಹಣ್ಣಿನಿಂದ ದಿನಕ್ಕೆ 7 ಸಾವಿರ ರೂಪಾಯಿ ಗಳಿಕೆ
'ಈಟಿವಿ ಭಾರತ್' ಜೊತೆಗೆ ಮಾತನಾಡಿದ ಹೋರಾಟಗಾರ ಆಶೋಕ ಚಂದರಗಿ ಮಾತನಾಡಿ, ''ಸಾಲ ಪಡೆಯುವಾಗ ಅದನ್ನು ಮರಳಿ ತುಂಬುವ ಬಗ್ಗೆ ಸರಿಯಾದ ವಿವೇಚನೆ ಇರಬೇಕು. ತಮ್ಮ ಇತಿ - ಮಿತಿಯೊಳಗೆ ತೆಗೆದುಕೊಳ್ಳಬೇಕು. ಮಿತಿಮೀರಿ ಸಾಲ ಮಾಡಿದಾಗ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಡುವೆ ಪ್ರಕೃತಿ ವಿಕೋಪದಿಂದ ನಿರೀಕ್ಷಿಸಿದಷ್ಟು ಬೆಳೆ ಬರದಿದ್ದರೆ, ಬೇರೆ ದಾರಿ ಕಾಣದೇ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರಗಳು ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. 2 ಲಕ್ಷ ರೂ. ಬೆಳೆ ಹಾನಿಯಾದರೆ ಕನಿಷ್ಟ 1 ಲಕ್ಷವಾದರೂ ಬೆಳೆ ವಿಮೆ ಸಿಗುವಂತಾಗಬೇಕು. ಇದರಿಂದ ರೈತರು ಕೊಂಚ ನೆಮ್ಮದಿ ಇರಲು ಸಾಧ್ಯವಾಗುತ್ತದೆ'' ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಿಕ ಮಾತನಾಡಿ, ''ಬರ, ಪ್ರವಾಹದಿಂದ ರೈತ ಸಂಪೂರ್ಣವಾಗಿ ಸೋತು ಹೋಗಿದ್ದಾನೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಹೋರಾಟ ಮಾಡಿದರೂ ನ್ಯಾಯ ಸಿಗುತ್ತಿಲ್ಲ. ರೈತರು ಬೆಳೆ ಬೆಳೆಯಲು ನೀರು, ವಿದ್ಯುತ್ ಕೊಟ್ಟು ಸೂಕ್ತ ಬೆಲೆ ನಿಗದಿಪಡಿಸಿದರೆ ಈ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು'' ಎಂದು ಅಭಿಪ್ರಾಯ ಪಟ್ಟರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಅವರನ್ನು 'ಈಟಿವಿ ಭಾರತ್' ಸಂಪರ್ಕಿಸಿದಾಗ, ''ಸಾಲಬಾಧೆಯಿಂದ 98 ರೈತರು ಆತ್ಮಹತ್ಯೆ ಮಾಡಿಕೊಂಡಿರೋದು ವರದಿಯಾಗಿದೆ. ಇನ್ನುಳಿದ ಪ್ರಕರಣಗಳು ಅರ್ಹ ಆಗಿಲ್ಲ. ಜಿಲ್ಲೆಯ ರೈತರು ಯಾವುದೇ ಕಾರಣಕ್ಕೂ ಎದೆಗುಂದಬಾರದು. ಸಾವಯವ ಕೃಷಿಯತ್ತ ಮುಖ ಮಾಡಿ, ಮಿಶ್ರ ಬೆಳೆ ಬೆಳೆದು, ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಗಳಿಸುವತ್ತ ಚಿಂತನೆ ನಡೆಸಬೇಕು. ಭೂಮಿ ತಾಯಿ ನಂಬಿ ದುಡಿದರೆ ಎಂದೂ ತಾಯಿ ಕೈ ಬಿಡುವುದಿಲ್ಲ ಎಂಬ ಆಶಾಭಾವನೆ ನಿಮ್ಮಲ್ಲಿರಬೇಕು'' ಎಂದು ಸಲಹೆ ನೀಡಿದರು.
ಇದನ್ನೂ ಓದಿ: ವಿಷಮುಕ್ತ ಭಾರತ ನಿರ್ಮಾಣಕ್ಕೆ ಬೆಳಗಾವಿ ರೈತನ ಪಣ: ಸಾವಯವ ಕೃಷಿಯಲ್ಲೇ ಸುಖ ಕಂಡ ಹಾದಿಮನಿ ಮನೆತನ