ಬೆಂಗಳೂರು: ಸಿಲಿಕಾನ್ ಸಿಟಿ ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗುತ್ತಿದೆ. ಈ ಬಾರಿ ಸುಮಾರು 7 ಲಕ್ಷಕ್ಕೂ ಅಧಿಕ ಜನ ಸಂಭ್ರಮಾಚರಣೆಗಾಗಿ ಬೆಂಗಳೂರಿನಲ್ಲಿ ಸೇರುವ ನಿರೀಕ್ಷೆಯಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಗೃಹ ಇಲಾಖೆ ಬೆಂಗಳೂರು ಪೊಲೀಸರಿಗೆ ಸೂಚಿಸಿದೆ. ಡಿ.31ರ ರಾತ್ರಿ 1 ಗಂಟೆಯವರೆಗೆ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅನುಮತಿಯಿದ್ದು, ನಗರದಾದ್ಯಂತ ಪೊಲೀಸರು, ಗೃಹರಕ್ಷಕ ದಳ, ಸಿವಿಲ್ ಡಿಫೆನ್ಸ್ ಸಿಬ್ಬಂದಿ ಸೇರಿದಂತೆ ಒಟ್ಟು 11,830 ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
ಒಟ್ಟು ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಓರ್ವ ಜಂಟಿ ಪೊಲೀಸ್ ಆಯುಕ್ತರು, 15 ಡಿಸಿಪಿಗಳು, 44 ಎಸಿಪಿಗಳು, 135 ಇನ್ಸ್ಪೆಕ್ಟರ್ಗಳು, 530 ಸಬ್ಇನ್ಸ್ಪೆಕ್ಟರ್ಗಳು, 655 ಸಹಾಯಕ ಸಬ್ಇನ್ಸ್ಪೆಕ್ಟರ್ಗಳು, 4,833 ಕಾನ್ಸ್ಟೇಬಲ್ಗಳು, 1,048 ಮಹಿಳಾ ಪೊಲೀಸ್ ಸಿಬ್ಬಂದಿ, 597 ಮಫ್ತಿ ಸಿಬ್ಬಂದಿ, 3,170 ಗೃಹರಕ್ಷಕ ದಳದ ಸಿಬ್ಬಂದಿ, 800 ಸಿವಿಲ್ ಡಿಫೆನ್ಸ್ ಸಿಬ್ಬಂದಿ ಸೇರಿದಂತೆ ಒಟ್ಟು 11,830 ಸಿಬ್ಬಂದಿಗಳು ನಗರದಾದ್ಯಂತ ಭದ್ರತೆ ವಹಿಸಲಿದ್ದಾರೆ. ಜೊತೆಗೆ ಹೆಚ್ಚುವರಿಯಾಗಿ 72 ಕೆಎಸ್ಆರ್ಪಿ ಪೊಲೀಸ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಪ್ರಮುಖ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ವರ್ಷಾಚರಣೆಯ ಕೇಂದ್ರ ಬಿಂದು ಎನಿಸಿರುವ ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಒಪೆರಾ ಜಂಕ್ಷನ್, ರಿಚ್ಮಂಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ. ಐವರು ಡಿಸಿಪಿಗಳು, 18 ಎಸಿಪಿ, 41 ಪೊಲೀಸ್ ಇನ್ಸ್ಪೆಕ್ಟರ್ಗಳು ಸೇರಿದಂತೆ ಒಟ್ಟು 2,572 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಅದೇ ರೀತಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಆಚರಿಸಲ್ಪಡುವ ಇತರೆ ಸ್ಥಳಗಳಾದ ಕಬ್ಬನ್‌ಪಾರ್ಕ್, ಟ್ರಿನಿಟಿ ಸರ್ಕಲ್, ಫೀನಿಕ್ಸ್ ಮಾಲ್, ಕೋರಮಂಗಲ, ಇಂದಿರಾನಗರದ 100 ಫೀಟ್ ರಸ್ತೆ, ಮಾರತ್ ಹಳ್ಳಿ, ಏರ್ಪೋರ್ಟ್ ರಸ್ತೆ, ವೈಟ್ ಫೀಲ್ಡ್ ಪ್ರದೇಶಗಳಲ್ಲಿ ನಾಲ್ವರು ಡಿಸಿಪಿಗಳು, 6 ಎಸಿಪಿಗಳು, 18 ಇನ್ಸ್ಪೆಕ್ಟರ್ಗಳು ಸೇರಿದಂತೆ 2,414 ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಮತ್ತು ನಗರದ ಪ್ರಮುಖ ಸ್ಟಾರ್ ಹೋಟೆಲ್‌ಗಳು, ಪಬ್ ಹಾಗೂ ಕ್ಲಬ್‌ಗಳ ಬಳಿ ಅಗತ್ಯ ಭದ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದ್ದು, ಜನಸಂದಣಿಯನ್ನ ನಿಯಂತ್ರಿಸಲು ಬಂದೋಬಸ್ತ್ ಹೆಚ್ಚಿಸಲಾಗಿದೆ.
ಮಹಿಳೆಯರು, ಮಕ್ಕಳ ಸುರಕ್ಷತೆ ಅಗತ್ಯ ಕ್ರಮ: ಮಹಿಳೆಯರ ಸುರಕ್ಷತೆಗಾಗಿ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನೊಳಗೊಂಡ 114 ಮಹಿಳಾ ಸುರಕ್ಷತಾ ಸ್ಥಳ ನಿರ್ಮಿಸಲಾಗಿದೆ. ಜೊತೆಗೆ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ 48 ಕಿಯೋಸ್ಕ್ಗಳನ್ನು ತೆರದಿದ್ದು, ಮಕ್ಕಳು ಕಾಣೆಯಾದಲ್ಲಿ ಅಥವಾ ಯಾವುದೇ ರೀತಿಯ ಕಳುವಿಗೆ ಸಂಬಂಧಿಸಿದ ದೂರುಗಳನ್ನ ನೀಡಬಹುದಾಗಿದೆ ಹಾಗೂ 54 ಕಡೆಗಳಲ್ಲಿ ಆರೋಗ್ಯ ಸೇವಾ ಸೆಂಟರ್‌ಗಳನ್ನು ತೆರೆಯಲಾಗಿದೆ.
ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಕಣ್ಗಾವಲಿಡಲು ಪೊಲೀಸ್ ಸಿಬ್ಬಂದಿಗಳಿಗೆ 63 ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದ್ದು, ಅವುಗಳಲ್ಲಿ ಕರ್ತವ್ಯಕ್ಕೆ ನೇಮಕ ಮಾಡಲಾಗುವ ಸಿಬ್ಬಂದಿಗಳಿಗೆ ಬೈನಾಕ್ಯುಲರ್ ಉಪಕರಣಗಳನ್ನು ಒದಗಿಸಲಾಗಿದೆ. ಜೊತೆಗೆ ಸಾರ್ವಜನಿಕ ಸಂಭ್ರಮಾಚರಣೆಗಳು ನಡೆಯುವ ಸ್ಥಳಗಳಲ್ಲಿ ಒಟ್ಟು 817 ಸಿಸಿಟಿವಿ ವೀಕ್ಷಣಾ ಘಟಕಗಳನ್ನು ನಿರ್ಮಿಸಲಾಗಿದೆ.
ಎಂ.ಜಿ.ರಸ್ತೆಯ ಮೆಟ್ರೋ ಪ್ರವೇಶಕ್ಕೆ ನಿರ್ಬಂಧ: ಕಳೆದ ವರ್ಷ ಸಂಭ್ರಮಾಚರಣೆಯನ್ನ ಮುಗಿಸಿ ಸಾರ್ವಜನಿಕರು ತೆರಳುವಾಗ ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿಯುಂಟಾಗಿ ನೂಕುನುಗ್ಗಲಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಎಚ್ಚೆತ್ತಿರುವ ಪೊಲೀಸರು ಈ ಬಾರಿ ರಾತ್ರಿ 11 ಗಂಟೆಯಿಂದ 2 ಗಂಟೆಯವರೆಗೆ ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣದಿಂದ ಬೇರೆಡೆಗೆ ನಿರ್ಗಮನಕ್ಕೆ ನಿಷೇಧ ವಿಧಿಸಿದ್ದಾರೆ. ಕೇವಲ ನಗರದ ವಿವಿಧ ಕಡೆಗಳಿಂದ ಬಂದಿಳಿಯಲು ಮಾತ್ರ ಅವಕಾಶವಿರಲಿದ್ದು, ತೆರಳುವವರು ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ಬದಲು ಟ್ರಿನಿಟಿ ಸರ್ಕಲ್ ಹಾಗೂ ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣಗಳನ್ನು ಬಳಸಬಹುದಾಗಿದೆ.
ರೇವ್ ಪಾರ್ಟಿ, ಮಾದಕ ದಂಧೆಗಳ ಮೇಲೆ ಕಣ್ಣು: ನೂತನ ವರ್ಷಾಚರಣೆ ಸಂದರ್ಭದಲ್ಲಿ ಮಾದಕ ವಸ್ತು ಸರಬರಾಜು, ರೇವ್ ಪಾರ್ಟಿಗಳನ್ನ ನಿಯಂತ್ರಿಸುವ ಉದ್ದೇಶದಿಂದ ಡಿಸೆಂಬರ್ ಮೊದಲ ವಾರದಿಂದಲೇ ನಗರದಾದ್ಯಂತ ವಿಶೇಷ ಕಾರ್ಯಾಚರಣೆಗಳನ್ನ ಕೈಗೊಳ್ಳಲಾಗಿದ್ದು, 3 ಜನ ವಿದೇಶಿ ಡ್ರಗ್ಸ್ ಪೆಡ್ಲರ್ಸ್ ಸೇರಿದಂತೆ 73 ಜನ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಹಾಗೂ ಅವರ ವಶದಲ್ಲಿದ್ದ 25.20 ಕೋಟಿ ಮೌಲ್ಯದ ಮಾದಕ ಪದಾರ್ಥಗಳನ್ನ ವಶಪಡಿಸಿಕೊಂಡು 54 ಪ್ರಕರಣಗಳನ್ನು ದಾಖಲಿಸಲಾಗಿದೆ.
ಸಂಚಾರಿ ಪೊಲೀಸರಿಂದ ಅಗತ್ಯ ಕ್ರಮ: ವರ್ಷಾಚರಣೆಯ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1ರ ಮುಂಜಾನೆ ಬೆಳಗ್ಗೆ 6ರ ವರೆಗೆ ನಗರದ ಎಲ್ಲಾ ಮೇಲ್ಸೇತುವೆಗಳ ಮೇಲೆ (ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಹೊರತುಪಡಿಸಿ) ಎಲ್ಲಾ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ ಆದೇಶಿಸಿದೆ ಹಾಗೂ ಡಿಸೆಂಬರ್ 31ರ ರಾತ್ರಿ 10 ಗಂಟೆಯಿಂದ ಜನವರಿ 1ರ ಬೆಳಗ್ಗೆ 6ರ ವರೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರಕ್ಕೆ ನಿರ್ಬಂಧವಿರಲಿದೆ.
ಸಂಭ್ರಮಾಚರಣೆಯ ಸಂದರ್ಭದಲ್ಲಿ ಮದ್ಯಪಾನ/ಮಾದಕ ಪದಾರ್ಥಗಳನ್ನ ಸೇವಿಸಿ ವಾಹನ ಚಾಲನೆ ಮಾಡುವವರ ಪತ್ತೆಗೆ ರಾತ್ರಿಯಿಡೀ ಬೇರೆ ಬೇರೆ ಸ್ಥಳಗಳಲ್ಲಿ ತಪಾಸಣೆಗೊಳಪಡಿಸಲು ಪೊಲೀಸರು ಸಿದ್ಧರಾಗಿದ್ದಾರೆ. ಅತಿವೇಗ ಮತ್ತು ಆಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಹಾಗೂ ವ್ಹೀಲಿಂಗ್, ಡ್ರ್ಯಾಗ್ ರೇಸ್‌ನಲ್ಲಿ ಭಾಗಿಯಾಗಿ ಇತರರಿಗೆ ತೊಂದರೆಯುಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ನೋ-ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್: ಸಂಚಾರಿ ಪೊಲೀಸರು ಸೂಚಿಸಿರುವ ಸ್ಥಳಗಳನ್ನು ಹೊರತುಪಡಿಸಿ ಇತರೆ ಸ್ಥಳಗಳಲ್ಲಿ ನಿಲ್ಲಿಸುವ ವಾಹನಗಳನ್ನ ಟೋಯಿಂಗ್ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸಂಭ್ರಮಾಚರಣೆಯಲ್ಲಿ ಭಾಗಿಯಾಗಲು ಬರುವ ಸಾರ್ವಜನಿಕರು ಆದಷ್ಟು ತಮ್ಮ ಸ್ವಂತ ವಾಹನಗಳನ್ನು ಬಳಸದೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ಮೆಟ್ರೋ, ಬಿಎಂಟಿಸಿ, ಕೆಎಸ್ಆರ್ಟಿಸಿ, ಆಟೋ ಅಥವಾ ಕ್ಯಾಬ್‌ಗಳನ್ನು ಬಳಸುವಂತೆ ಕೋರಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರದ 100 ಫೀಟ್ ರಸ್ತೆ ಮತ್ತಿತರ ಕಡೆಗಳಲ್ಲಿ ಡಿಸೆಂಬರ್ 31ರ ರಾತ್ರಿ 8 ಗಂಟೆಯಿಂದ ಜನವರಿ 1ರ ಮುಂಜಾನೆ 2 ಗಂಟೆಯವರೆಗೂ ಪೊಲೀಸ್ ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನ ಹೊರತುಪಡಿಸಿ ಇತರೆ ವಾಹನಗಳಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ: ಹೊಸ ವರ್ಷಾಚರಣೆ: ಡಿ.31ರಿಂದ ಜ.1ರ ನಸುಕಿನ 2 ಗಂಟೆಯವರೆಗೆ ಬಿಎಂಟಿಸಿ ಬಸ್ ಸೇವೆ