ಬೆಳಗಾವಿ: ಗ್ರಾಮ ಲೆಕ್ಕಾಧಿಕಾರಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1 ಕೋಟಿ 10 ಲಕ್ಷ ರೂ. ಹಣವನ್ನು ಪೊಲೀಸರು ಜಪ್ತಿ ಪಡಿಸಿಕೊಂಡಿರುವ ಘಟನೆ ರಾಮದುರ್ಗ ತಾಲೂಕಿನ ಹಲಗತ್ತಿ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ. ನಿಪ್ಪಾಣಿ ತಾಲೂಕಿನಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಮದುರ್ಗ ತಾಲೂಕಿನ ಹೊಸೂರು ಗ್ರಾಮದ ವಿಠ್ಠಲ ಢವಳೇಶ್ವರ ಎಂಬುವರ ಕಾರಿನಲ್ಲಿ ಬೆಳಗಾವಿಯಿಂದ ಬಾಗಲಕೋಟೆಗೆ ಹಣ ಸಾಗಿಸಲಾಗುತ್ತಿತ್ತು.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ರಾಮದುರ್ಗ ಡಿವೈಎಸ್‌ಪಿ ಎಂ.ಪಾಂಡುರಂಗಯ್ಯ, ಸಿಪಿಐ ಈರಣ್ಣ ಪಟ್ಟಣಶೆಟ್ಟಿ ನೇತೃತ್ವದ ತಂಡದ ಕೈಗೆ 1,10,62,900 ರೂ. ನಗದು ಹಣದ ಜೊತೆಗೆ ಸಿಕ್ಕಿ ಬಿದ್ದಿದ್ದಾರೆ. ಸ್ಥಳಕ್ಕೆ ಬೆಳಗಾವಿಯ ಆದಾಯ ತೆರಿಗೆ ಇಲಾಖೆ ಸಹಾಯಕ ನಿರ್ದೇಶಕ ಅಮಿತ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪೊಲೀಸರು ವರ್ಗಾವಣೆ ಮಾಡಿದ್ದು, ಅಷ್ಟು ದೊಡ್ಡ ಮೊತ್ತದ ಹಣ ಯಾರದ್ದು ಎಂಬುದು ಸೇರಿದಂತೆ ಮತ್ತಿತರ ವಿಚಾರಗಳ ಕುರಿತು ಹೆಚ್ಚಿನ ವಿಚಾರಣೆ ನಡೆದಿದೆ.
ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾ ದಾಳಿ: ಯಾರ‍್ಯಾರ ಬಳಿ ಎಷ್ಟೆಷ್ಟು ಕೋಟಿ ಆಸ್ತಿ.. ಇಲ್ಲಿದೆ ವಿವರ - Lokayukta raid