ನವದೆಹಲಿ: ರಾಜಕೀಯ ದಂಗಲ್ ನಡೆಸುತ್ತಿರುವ ಕುಸ್ತಿಪಟು ವಿನೇಶ್ ಪೋಗಟ್, ತಮ್ಮ ಬಗ್ಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಪ್ರಾಧಿಕಾರ (ನಾಡಾ) ನೋಟಿಸ್ ಜಾರಿ ಮಾಡಿದೆ. 14 ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ.
ಹರಿಯಾಣದ ಸೋನಿಪತ್‌ನಲ್ಲಿರುವ ವಿನೇಶ್ ಅವರ ನಿವಾಸಕ್ಕೆ ಡೋಪ್ ನಿಯಂತ್ರಣ ಅಧಿಕಾರಿಯನ್ನು ಸೆಪ್ಟೆಂಬರ್ 9 ರಂದು ಕಳುಹಿಸಲಾಗಿತ್ತು. ಆ ವೇಳೆ ಕುಸ್ತಿಪಟು ಮನೆಯಲ್ಲಿ ಇರಲಿಲ್ಲ. ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಪೋಗಟ್ ಅವರಿಗೆ ನಾಡಾ ನೋಟಿಸ್ ನೀಡಿದೆ.
ಎಡಿಆರ್ ಪ್ರಕಾರ, ತಾವು ಇರುವ ನಿವಾಸದ ಬಗ್ಗೆ ಮಾಹಿತಿ ನೀಡಲು ಕುಸ್ತಿಪಟು ವಿಫಲವಾಗಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ತಮ್ಮ ಅಭಿಪ್ರಾಯವನ್ನು ಕೋರಲಾಗಿದೆ. ಹೀಗಾಗಿ ನೋಟಿಸ್ ಜಾರಿಯಾದ ದಿನದಿಂದ 14 ದಿನಗಳ ಒಳಗೆ ಮಾಹಿತಿ ಹಂಚಿಕೊಳ್ಳಿ ಎಂದು ನೋಟಿಸ್ನಲ್ಲಿ ಸೂಚಿಸಲಾಗಿದೆ.
ಸೆಪ್ಟೆಂಬರ್ 9ಕ್ಕೆ ನಾಡಾದ ಅಧಿಕಾರಿ ವಿನೇಶ್ ನಿವಾಸಕ್ಕೆ ಭೇಟಿ: ಕುಸ್ತಿಪಟು ನೀಡಿದ ಮಾಹಿತಿಯಂತೆ ಸೆಪ್ಟೆಂಬರ್ 9 ರಂದು ನಾಡಾದ ಅಧಿಕಾರಿ ನಿವಾಸಕ್ಕೆ ಆಗಮಿಸಿದ್ದರು. ಆದರೆ, ಅಂದು ಕುಸ್ತಿಪಟು ಲಭ್ಯವಿರಲಿಲ್ಲ. ಆ ದಿನ ಮತ್ತು ನಿಗದಿ ಮಾಡಿದ ಸ್ಥಳದಲ್ಲಿ ನಿಮ್ಮನ್ನು ಪರೀಕ್ಷಿಸಲು ಡೋಪ್ ಕಂಟ್ರೋಲ್ ಅಧಿಕಾರಿ (DCO) ಮುಂದಾಗಿದ್ದರು. ನೀವು ಸ್ಥಳದಲ್ಲಿ ಇಲ್ಲದ ಕಾರಣ ಡಿಸಿಒ ನಿಮ್ಮನ್ನು ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ ಎಂದು ನಾಡಾ ಹೇಳಿದೆ.
ವಿಶ್ವ ಡೋಪಿಂಗ್ ವಿರೋಧಿ ಪ್ರಾಧಿಕಾರದ ನಿಯಮಗಳ ಪ್ರಕಾರ, ಕುಸ್ತಿಪಟುಗಳು ನೋಂದಾಯಿತ ಪರೀಕ್ಷಾ ಪೂಲ್‌ನ ಭಾಗವಾಗಿದ್ದಾರೆ. ಆದ್ದರಿಂದ ಅವರು ಅಗತ್ಯವಿದ್ದಲ್ಲಿ ಪರೀಕ್ಷೆಗೆ ಲಭ್ಯವಾಗುವಂತಹ ದಿನ, ಸ್ಥಳದ ಮಾಹಿತಿ ನೀಡಬೇಕು. ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿನೇಶ್, ನೋಂದಾಯಿತ ಪರೀಕ್ಷಾ ಪೂಲ್‌ನ ಭಾಗವಾಗಿದ್ದಾರೆ. ಹೀಗಾಗಿ ಅವರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಬೇಕಿದೆ.
ನೋಂದಣಿಯಾದ 12 ತಿಂಗಳೊಳಗೆ ಮೂರು ಬಾರಿ ಡೋಪಿಂಗ್ ಪರೀಕ್ಷೆಗೆ ಒಳಗಾಗದಿದ್ದರೆ, ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಡೋಪಿಂಗ್ ನಡೆಸಿದ ಕ್ರೀಡಾಪಟುಗಳಿಗೆ ನೀಡಿದ ಶಿಕ್ಷೆಯನ್ನೇ ವಿಧಿಸಲಾಗುತ್ತದೆ. ವಿನೇಶ್ ಫೋಗಟ್ ಅವರು ಮೊದಲ ಪರೀಕ್ಷೆಗೆ ಗೈರಾಗಿದ್ದಾರೆ.
ಪೋಗಟ್ ರಾಜಕೀಯ ದಂಗಲ್: ಪ್ಯಾರಿಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಫೈನಲ್ಗೂ ಮುನ್ನ ಅಧಿಕ ತೂಕದ ಕಾರಣ ಅನರ್ಹಗೊಂಡ ವಿನೇಶ್ ಪೋಗಟ್ ಬಳಿಕ ಕಾಂಗ್ರೆಸ್ ಪಕ್ಷ ಸೇರಿ ರಾಜಕೀಯ ದಂಗಲ್ ಆರಂಭಿಸಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಈಗಾಗಲೇ ಅವರು ಕಾಂಗ್ರೆಸ್ನಿಂದ ಜೂಲಾನಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ: ಭಾರತ - ಬಾಂಗ್ಲಾದೇಶ 2ನೇ ಟೆಸ್ಟ್: ಕುಲದೀಪ್ ಯಾದವ್ಗೆ ಅವಕಾಶ?, ಪಂದ್ಯಕ್ಕೆ ಮಳೆ ಭೀತಿ - IND vs BAN 2nd test