ನವದೆಹಲಿ: ಬೆಂಗಳೂರಿನಲ್ಲಿ ಆರಂಭಗೊಂಡ ಮಹಿಳಾ ಪ್ರೀಮಿಯರ್ ಲೀಗ್ ಸೀಸನ್-2 ನಿನ್ನೆ ದೆಹಲಿಯಲ್ಲಿ ಮುಕ್ತಾಯಗೊಂಡಿದೆ. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದರ ಜೊತೆಗೆ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಪ್ರಶಸ್ತಿಯನ್ನೂ ಗೆದ್ದ ಆರ್‌ಸಿಬಿ, ಈ ಮೂರೂ ಪ್ರಶಸ್ತಿಗಳನ್ನು ಪಡೆದ ಮೊದಲ ತಂಡವಾಗಿ ಅಪರೂಪದ ಸಾಧನೆ ಮಾಡಿದೆ.
ಆರೆಂಜ್ ಕ್ಯಾಪ್: ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ತೋರಿದ ಆರ್‌ಸಿಬಿಯ ಎಲ್ಲಿಸ್ ಪೆರ್ರಿ 341 ರನ್ ಗಳಿಸಿದ್ದು, ಸೀಸನ್ನ ಅತ್ಯಧಿಕ ಸ್ಕೋರರ್ ಆಗಿ ಆರೆಂಜ್ ಕ್ಯಾಪ್ ಪ್ರಶಸ್ತಿ ಪಡೆದರು. ಇದರೊಂದಿಗೆ ಆಸ್ಟ್ರೇಲಿಯಾ ಆಟಗಾರ್ತಿಗೆ ಬಹುಮಾನವಾಗಿ 5 ಲಕ್ಷ ರೂಪಾಯಿ ನೀಡಲಾಯಿತು.
ಪರ್ಪಲ್ ಕ್ಯಾಪ್: ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆರ್‌ಸಿಬಿಯ ಶ್ರೇಯಾಂಕಾ ಪಾಟೀಲ್ ಪರ್ಪಲ್ ಕ್ಯಾಪ್ ಪಡೆದರು. ಅಂತಿಮ ಪಂದ್ಯದಲ್ಲಿ ಶ್ರೇಯಾಂಕಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 13 ವಿಕೆಟ್ ಉರುಳಿಸಿದ ಅವರು ಪರ್ಪಲ್ ಕ್ಯಾಪ್ ಪ್ರಶಸ್ತಿಯೊಂದಿಗೆ 5 ಲಕ್ಷ ಬಹುಮಾನ ಪಡೆದರು.
ಉದಯೋನ್ಮುಖ ಆಟಗಾರ್ತಿ: ಋತುವಿನ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಕೂಡ ಶ್ರೇಯಾಂಕಾ ಪಾಟೀಲ್ ಪಾಲಾಯಿತು. ಈ ಪ್ರಶಸ್ತಿಯೊಂದಿಗೆ 5 ಲಕ್ಷ ಬಹುಮಾನವಾಗಿ ನೀಡಲಾಯಿತು.
ಬೆಸ್ಟ್ ಸ್ಟ್ರೈಕ್ ರೇಟ್ ಪ್ರಶಸ್ತಿ: ಆರ್‌ಸಿಬಿ ಆಟಗಾರ್ತಿ ಜಾರ್ಜಿಯಾ ವೇರ್ ಹ್ಯಾಮ್ ಅವರಿಗೆ 5 ಲಕ್ಷ ರೂ. ಬಹುಮಾನದೊಂದಿಗೆ ಸರಣಿಯ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ ನೀಡಲಾಯಿತು.
ಫೇರ್ ಪ್ಲೇ ಪ್ರಶಸ್ತಿ: ಸರಣಿಯುದ್ದಕ್ಕೂ ಅದ್ಬುತ ಪ್ರದರ್ಶನ ತೋರಿದ ಬೆಂಗಳೂರು ತಂಡಕ್ಕೆ ಫೇರ್ ಪ್ಲೇ ಪ್ರಶಸ್ತಿಯೊಂದಿಗೆ 5 ಲಕ್ಷ ರೂ ಬಹುಮಾನ ಒಲಿದುಬಂತು.
ಸರಣಿ ಶ್ರೇಷ್ಠ ಪ್ರಶಸ್ತಿ: ಡೆಲ್ಲಿ ಕ್ಯಾಪಿಟಲ್ನ ದೀಪ್ತಿ ಶರ್ಮಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಈ ಟೂರ್ನಿಯಲ್ಲಿ ಆಲ್ರೌಂಡರ್ ಪ್ರದರ್ಶನ ನೀಡಿದ ದೀಪ್ತಿ ಎಂಟು ಪಂದ್ಯಗಳಲ್ಲಿ 98.33 ಸರಾಸರಿಯಲ್ಲಿ 295 ರನ್ ಗಳಿಸಿದರು. ಇದರಲ್ಲಿ ಮೂರು ಅರ್ಧ ಶತಕಗಳು ಸೇರಿವೆ. ಬೌಲಿಂಗ್ನಲ್ಲೂ ಮಿಂಚಿದ ದೀಪ್ತಿ ಎಂಟು ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಪಂದ್ಯ ಶ್ರೇಷ್ಠ ಪ್ರಶಸ್ತಿ: ಆರ್‌ಸಿಬಿಯ ಸೋಫಿ ಮೊಲಿನೌ ಅಂತಿಮ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನಾಲ್ಕು ಓವರ್‌ಗಳ 20 ರನ್‌ಗಳನ್ನು ನೀಡಿ ಪ್ರಮುಖ 3 ವಿಕೆಟ್ ಪಡೆದರು. ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಫೈನಲ್ ವಿಜೇತ ಪ್ರಶಸ್ತಿ: ಡಬ್ಲ್ಯೂಪಿಎಲ್ ಸೀಸನ್-2 ಫೈನಲ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಪಿಯೊಂದಿಗೆ 6 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಪಡೆಯಿತು.
ರನ್ನರ್ ಅಪ್ ಪ್ರಶಸ್ತಿ: ಫೈನಲ್ನಲ್ಲಿ ಆರ್‌ಸಿಬಿ ವಿರುದ್ದ ಸೋತ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರನ್ನರ್ ಅಪ್ ಪ್ರಶಸ್ತಿಯೊಂದಿಗೆ 3 ಕೋಟಿ ರೂ ನೀಡಲಾಯಿತು.
ಪ್ರಶಸ್ತಿ ಮೊತ್ತ ಪಾಕಿಸ್ತಾನ ಲೀಗ್ಗಿಂತಲು ಅಧಿಕ: ಮಹಿಳಾ ಪ್ರೀಮಿಯರ್ ಲೀಗ್‌ನ ಬಹುಮಾನದ ಮೊತ್ತವು ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ (ಪಿಎಸ್‌ಎಲ್) ವಿಜೇತ ತಂಡ ಪಡೆಯುವ ಮೊತ್ತಕ್ಕಿಂತ ದುಪ್ಪಟ್ಟಾಗಿದೆ. ಪಿಎಸ್ಎಲ್ನಲ್ಲಿ ಪ್ರಶಸ್ತಿ ವಿಜೆತ ತಂಡಕ್ಕೆ ಬಹುಮಾನವಾಗಿ 3.5 ಕೋಟಿ ನೀಡಲಾಗುತ್ತದೆ. ಇದು ಭಾರತ ಮಹಿಳಾ ಪ್ರೀಮಿಯರ್ ಲೀಗ್ಗೆ ಹೋಲಿಕೆ ಮಾಡಿದರೆ 2 ಪಟ್ಟು ಕಡಿಮೆ.
ಇದನ್ನೂ ಓದಿ: 'ಈ ಸಲ ಕಪ್ ನಮ್ದು' ಎಂದ ಸ್ಮೃತಿ ಮಂಧಾನ; ಆರ್‌ಸಿಬಿ ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ