ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲ್ಯೂಪಿಎಲ್) ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶ ವಾರಿಯರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 42 ರನ್‌ಗಳಿಂದ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಕಳೆದ ಪಂದ್ಯದಲ್ಲಿ ಯುಪಿ ಎದುರಿನ ಸೋಲಿಗೆ ಮುಂಬೈ ಸೇಡು ತೀರಿಸಿಕೊಂಡಂತಿದೆ.
ಮುಂಬೈ ನೀಡಿದ 161 ರನ್ ಗುರಿಯೊಂದಿಗೆ ಕಣಕ್ಕಿಳಿದ ಉತ್ತರ ಪ್ರದೇಶ ವಾರಿಯರ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 118 ರನ್ ಮಾತ್ರ ಗಳಿಸಿತು. ದೀಪ್ತಿ ಶರ್ಮಾ (53) ಅಗ್ರ ಸ್ಕೋರರ್ ಆದರು. ಇತರ ಆಟಗಾರರು ವಿಫಲರಾದರು. ಶ್ವೇತಾ ಸೆಹ್ರಾವತ್ (17) ಮತ್ತು ಗ್ರೇಸ್ ಹ್ಯಾರಿಸ್ (15) ಅಲ್ಪ ಮೊತ್ತ ಸೇರಿಸಿದರು. ಮುಂಬೈ ಬೌಲರ್ಗಳ ಪೈಕಿ ಸೈಕಾ 3, ಸೀವರ್ 2 ಹಾಗೂ ಇತರ ಬೌಲರ್ಗಳು ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್ ಪೇರಿಸಿತು. ನ್ಯಾಟ್ ಸೀವರ್ 31 ಎಸೆತಗಳಲ್ಲಿ 8 ಬೌಂಡರಿಸಹಿತ 45 ರನ್ ಗಳಿಸಿ ನಿರ್ಣಾಯಕ ಇನಿಂಗ್ಸ್ ಆಡಿದರು. ಹರ್ಮನ್‌ಪ್ರೀತ್ ಕೌರ್ 30 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 33 ರನ್ ಸಿಡಿಸಿ ಔಟಾದರು.
ಕೊನೆಯಲ್ಲಿ ಬಂದ ಅಮೆಲಿಯಾ ಕೆರ್ 23 ಎಸೆತಗಳಲ್ಲಿ 6 ಬೌಂಡರಿಸಹಿತ 39 ರನ್ ಗಳಿಸಿದರೆ, 14 ಎಸೆತಗಳಲ್ಲಿ 4 ಬೌಂಡರಿಸಹಿತ 22 ರನ್ ಹೊಡೆದ ಸಜ್ನಾ ಆಕ್ರಮಣಕಾರಿ ಆಟವಾಡಿದರು. ಉತ್ತರ ಪ್ರದೇಶದ ಬೌಲರ್‌ಗಳಲ್ಲಿ ಚಾಮರಿ ಅಟಪಟ್ಟು, ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮಾ ಮತ್ತು ಸೈಮಾ ಠಾಕೂರ್ ತಲಾ 2 ವಿಕೆಟ್ ಪಡೆದರು.
ಇನಿಂಗ್ಸ್ ಆರಂಭದಲ್ಲಿ ಮುಂಬೈ ಸರಣಿ ಆಘಾತಗಳನ್ನು ಎದುರಿಸಿತು. ವಾರಿಯರ್ಸ್ ಸ್ಪಿನ್ನರ್ ಚಾಮರಿ ಅಟಪಟ್ಟು ತಮ್ಮ ಸತತ ಓವರ್‌ಗಳಲ್ಲಿ ಹೇಲಿ ಮ್ಯಾಥ್ಯೂಸ್ (4) ಮತ್ತು ಯಾಸ್ತಿಕಾ ಭಾಟಿಯಾ (9) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಮುಂಬೈ 17 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಆಗ ಮೈದಾನಕ್ಕೆ ಬಂದ ನ್ಯಾಟ್ ಸೀವರ್ ತಂಡಕ್ಕೆ ನೆರವಾದರು. ನ್ಯಾಟ್ ಸೀವರ್ ಹಾಗೂ ಹರ್ಮನ್‌ಪ್ರೀತ್ ಕೌರ್ ಮೂರನೇ ವಿಕೆಟ್‌ಗೆ 59 ರನ್‌ಗಳ ಜೊತೆಯಾಟವಾಡಿದರು. ಆದರೆ, ಅರ್ಧ ಶತಕದ ಸಮೀಪದಲ್ಲಿದ್ದ ನ್ಯಾಟ್ ಸೀವರ್ ಅವರನ್ನು ರಾಜೇಶ್ವರಿ ಗಾಯಕ್ವಾಡ್ ಔಟ್ ಮಾಡಿದರು. ಸ್ಥಿರವಾಗಿ ಮುನ್ನಡೆಯುತ್ತಿದ್ದ ಹರ್ಮನ್ ಪ್ರೀತ್ ಅವರನ್ನು ಸೈಮಾ ಠಾಕೂರ್ ಕ್ಲೀನ್ ಬೌಲ್ಡ್ ಮಾಡಿ ಪೆವಿಲಿಯನ್‌ಗೆ ಕಳುಹಿಸಿದರು.
ದೀಪ್ತಿ ಶರ್ಮಾ ಎಸೆದ ಮುಂದಿನ ಓವರ್‌ನಲ್ಲಿ, ಅಮನ್ಜ್ಯೋತ್ ಕೌರ್ (7) ಸೈಮಾಗೆ ವಿಕೆಟ್ ಒಪ್ಪಿಸಿದರು. ಕೊನೆಯ ನಾಲ್ಕು ಓವರ್‌ಗಳಲ್ಲಿ ಅಮೆಲಿಯಾ ಕೆರ್ ಮತ್ತು ಸಜ್ನಾ ಉತ್ತಮ ಪ್ರದರ್ಶನ ನೀಡಿದ್ದರಿಂದ ಮುಂಬೈ 160 ರನ್ ಗಳಿಸಲು ಸಾಧ್ಯವಾಯಿತು.
ಇದನ್ನೂ ಓದಿ: 5ನೇ ಟೆಸ್ಟ್: ಕುಲದೀಪ್ ಯಾದವ್ಗೆ 5 ವಿಕೆಟ್ ಗೊಂಚಲು, ಇಂಗ್ಲೆಂಡ್ 218ಕ್ಕೆ ಆಲೌಟ್