Border Gavaskar Trophy: ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ದಿನಗಣನೆ ಆರಂಭವಾಗಿದೆ. ಸರಣಿ ಆರಂಭಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಇದೆ. ಈ ಪ್ರತಿಷ್ಠಿತ ಸರಣಿ ಭಾರತದ ಪಾಲಿಗೆ ಮಹತ್ವ ಪಡೆದುಕೊಂಡಿದೆ. ಇತ್ತೀಚೆಗೆ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3-0 ಅಂತರದಿಂದ ಹೀನಾಯ ಸೋಲನುಭವಿಸಿದ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (World Test Championship) ಅಂಕ ಪಟ್ಟಿಯಲ್ಲೂ ಕುಸಿತ ಕಂಡು 2ನೇ ಸ್ಥಾನಕ್ಕೆ ತಲುಪಿದೆ.
ಇದೀಗ WTC ಫೈನಲ್ಗೆ ಪ್ರವೇಶ ಪಡೆಯಬೇಕೆಂದರೆ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 5 ಪಂದ್ಯಗಳ ಈ ಸರಣಿಯಲ್ಲಿ 4 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಹೀಗಾದಲ್ಲಿ ಮಾತ್ರ ಭಾರತ ಯಾವುದೇ ತಂಡಗಳ ಫಲಿತಾಂಶವನ್ನು ಅವಲಂಭಿಸದೇ ನೇರವಾಗಿ WTC ಫೈನಲ್ಗೆ ಪ್ರವೇಶ ಪಡೆಯಲಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯು ನ.22 ರಿಂದ ಪ್ರಾರಂಭವಾಗಲಿದೆ.
ಈ ಮಹತ್ವದ ಸರಣಿಯ ಮೊದಲ ಪಂದ್ಯಕ್ಕೆ ಪರ್ತ್ ಮೈದಾನ ಆತಿಥ್ಯ ವಹಿಸಿಕೊಂಡಿದೆ. ಇದು ವೇಗದ ಬೌಲರ್ಗಳಿಗೆ ಹೆಚ್ಚಿನ ಸಹಕಾರಿಯಾಗಿದ್ದು ಬೌನ್ಸಸರ್ಗಳಿಗೆ ಹೆಸರುವಾಸಿಯಾಗಿದೆ. ಆದ್ರೆ ಈ ಮೈದಾನದಲ್ಲಿ ಭಾರತ ಕೊನೆಯ ಬಾರಿ ಯಾವಾಗ ಆಡಿತ್ತು ಮತ್ತು ಫಲಿತಾಂಶ ಏನಾಗಿತ್ತು ಎಂಬುದನ್ನು ಇದೀಗ ತಿಳಿಯೋಣ.
ಪರ್ತ್ ಮೈದಾನದಲ್ಲಿ ಟೀಂ ಇಂಡಿಯಾದ ಕೊನೆಯ ಟೆಸ್ಟ್ ಫಲಿತಾಂಶ
2018 ಡಿಸೆಂಬರ್ 14 ರಿಂದ 18ರ ವರೆಗೆ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಪರ್ತ್‌ನಲ್ಲಿ ಮುಖಾಮುಖಿಯಾಗಿದ್ದವು. ಇದು ಸರಣಿಯ ಎರಡನೇ ಟೆಸ್ಟ್ ಆಗಿತ್ತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 326 ರನ್ ಕಲೆಹಾಕಿದ್ದರೆ, ಇದಕ್ಕುತ್ತರವಾಗಿ ಭಾರತ ವಿರಾಟ್ ಕೊಹ್ಲಿ ಅವರ ಶತಕ, ಅಜಿಂಕ್ಯ ರಹಾನೆ (51) ಅರ್ಧಶತಕದ ನೆರವಿನಿಂದ 283 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊಹ್ಲಿ 123 ರನ್ ಗಳಿಸುವ ಮೂಲಕ ತಮ್ಮ ವೃತ್ತಿಜೀವನದ ಅತ್ಯುತ್ತಮ ಟೆಸ್ಟ್ ಶತಕಗಳಲ್ಲಿ ಇದು ಕೂಡ ಒಂದಾಯಿತು. ಆದರೆ ನಾಥನ್ ಲಿಯಾನ್ ಐದು ವಿಕೆಟ್ ಕಬಳಿಸುವ ಮೂಲಕ ಭಾರತವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಎರಡನೇ ಇನ್ನಿಂಗ್ಸ್: ಬಳಿಕ 46 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್ 243 ರನ್ ಕಲೆ ಹಾಕಿ ಭಾರತಕ್ಕೆ 287 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು. ಆದರೇ ಆಸ್ಟ್ರೇಲಿಯಾದ ಬೌಲಿಂಗ್ ದಾಳಿಗೆ ಸಿಲುಕಿದ ಭಾರತ 140 ರನ್ ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ ವಿರಾಟ್ ಕೊಹ್ಲಿ ಅವರ ಅಮೋಘ ಶತಕದ ಹೊರತಾಗಿಯೂ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 146 ರನ್‌ಗಳ ಸೋಲನುಭವಿಸಿತು.
ಪರ್ತ್ ಮೈದಾನ ಅಂಕಿಅಂಶ: ಪರ್ತ್ ಮೈದಾನದಲ್ಲಿ ಇದುವರೆಗೂ ಕೇವಲ 4 ಟೆಸ್ಟ್ ಪಂದ್ಯಗಳು ಮಾತ್ರ ನಡೆದಿವೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ್ದ ತಂಡಗಳು ನಾಲ್ಕು ಬಾರಿ ಗೆಲುವು ಸಾಧಿಸಿವೆ. ಈ ಮೈದಾನದಲ್ಲಿ ಟಾಸ್ ನಿರ್ಣಾಯಕವಾಗಲಿದೆ.
ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ನುಚ್ಚುನೂರಾದ ದಿನ: ಎಂದಿಗೂ ಮಾಸದ ಆ ಕಹಿ ಘಟನೆಗೆ ಒಂದು ವರ್ಷ!