Border Gavaskar Trophy History: ಭಾರತ ಮತ್ತು ಅಸ್ಟ್ರೇಲಿಯಾ ನಡುವೆ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ನಡೆಯುತ್ತಿದೆ. ಈಗಾಗಲೇ ಎರಡು ಪಂದ್ಯಗಳು ಮುಕ್ತಾಯಗೊಂಡಿದ್ದು ಎರಡು ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದುಕೊಂಡಿವೆ. ಇದೀಗ ಗಬ್ಬಾದಲ್ಲಿ ಮೂರನೇ ಪಂದ್ಯವನ್ನು ಆಡುತ್ತಿವೆ.
ಆದ್ರೆ ಈ ಪ್ರತಿಷ್ಠಿತ ಟ್ರೋಫಿ ಕಳೆದ ಎರಡು ದಶಕಗಳಿಂದಲೂ ಉಭಯ ತಂಡಗಳ ಮಧ್ಯೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಸರಣಿ ಆಶಸ್ ಟ್ರೋಫಿಗಿಂತಲು ಪ್ರಖ್ಯಾತಿ ಪಡೆದುಕೊಂಡಿದೆ. ಇಂತಹ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಯಾವಾಗ ಪ್ರಾರಂಭವಾಯಿತು? ಆ ಹೆಸರು ಹೇಗೆ ಬಂತು? ಇದರ ಇತಿಹಾಸ ಏನು? ಎಂದು ಇದೀಗ ತಿಳಿದುಕೊಳ್ಳೋಣ.
ಬಾರ್ಡರ್ ಗವಾಸ್ಕರ್ ಟ್ರೋಫಿ ಇತಿಹಾಸ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯವು 28 ನವೆಂಬರ್ 1947 ರಂದು ನಡೆಯಿತು. ಅಂದು ಉಭಯ ತಂಡಗಳ ನಡುವಿನ ಈಸರಣಿಗೆ ಯಾವುದೇ ವಿಶೇಷ ಹೆಸರಿರಲಿಲ್ಲ. 1996 ರವರೆಗೆ, ಉಭಯ ದೇಶಗಳ ನಡುವೆ ಒಟ್ಟು 50 ಟೆಸ್ಟ್ ಒಂದ್ಯಗಳು ನಡೆದಿದ್ದವು. ನಂತರ 51ನೇ ಟೆಸ್ಟ್ ಪಂದ್ಯವನ್ನು ವಿಶೇಷವಾಗಿ ನಡೆಸಲು ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳು ನಿರ್ಧರಿಸಿದವು. ಅಲ್ಲದೆ ಈ ಟೆಸ್ಟ್ ಪಂದ್ಯಕ್ಕೆ ಬಾರ್ಡರ್-ಗವಾಸ್ಕರ್ ಟ್ರೋಫಿ ಎಂದು ಹೆಸರಿಸಿದರು.
ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಅವರ ಗೌರವಾರ್ಥವಾಗಿ ಈ ಸರಣಿಗೆ ಹೆಸರಿಡಲಾಯಿತು. ಆ ಸಮಯದಲ್ಲಿ, ಈ ಇಬ್ಬರು ದಿಗ್ಗಜ ಬ್ಯಾಟ್ಸ್‌ಮನ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದರು. ಅಂದಿನಿಂದ ಉಭಯ ದೇಶಗಳ ಮಧ್ಯೆ ಬಾರ್ಡರ್-ಗವಾಸ್ಕರ್ ಟ್ರೋಫಿ ಪ್ರಾರಂಭವಾಯಿತು. ಅಂದಿನಿಂದ ಈ ವರೆಗೂ ಟ್ರೋಫಿ ಯಶಸ್ವಿಯಾಗಿ ಸಾಗುತ್ತಿದೆ.
ಸರಣಿಯಲ್ಲಿ ಭಾರತಕ್ಕೆ ಮೇಲುಗೈ
ಆಸ್ಟ್ರೇಲಿಯಾ ನೆಲದಲ್ಲಿ ಸಾಮಾನ್ಯ ತಂಡವಾಗಿದ್ದ ಭಾರತ 2017ರಿಂದ ಹೊಸ ಇತಿಹಾಸಕ್ಕೆ ನಾಂದಿ ಹಾಡಿತು. ಉಭಯ ತಂಡಗಳ ನಡುವೆ ಇದುವರೆಗೆ 16 ಬಾರ್ಡರ್ ಗವಾಸ್ಕರ್ ಟ್ರೋಫಿ ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 10 ಸರಣಿಗಳನ್ನು ಗೆದ್ದುಕೊಂಡಿದ್ದು, ಅದರಲ್ಲಿ ಎರಡು ಗೆಲುವುಗಳು ಆಸ್ಟ್ರೇಲಿಯಾದಲ್ಲಿವೆ. ಇದೇ ವೇಳೆ ಆಸ್ಟ್ರೇಲಿಯಾ ಕೂಡ 5ರಲ್ಲಿ ಗೆಲುವು ಸಾಧಿಸಿದೆ. 2003–04ರಲ್ಲಿ ನಡೆದ ಸರಣಿಯು 1–1ರಲ್ಲಿ ಸಮಬಲವಾಗಿತ್ತು.
ಭಾರತದ ನೆಲದಲ್ಲಿ ಆಸ್ಟ್ರೇಲಿಯಾ ಒಮ್ಮೆ ಮಾತ್ರ ಟ್ರೋಫಿಯನ್ನು ಗೆದ್ದುಕೊಂಡಿದೆ. ಆಸ್ಟ್ರೇಲಿಯಾ ಕೊನೆಯ ಬಾರಿಗೆ 2014-15ರಲ್ಲಿ ಈ ಪ್ರತಿಷ್ಠಿತ ಟ್ರೋಫಿ ಗೆದ್ದಿತ್ತು. ಆ ಬಳಿಕ ನಡೆದ ನಾಲ್ಕೂ ಸರಣಿಗಳಲ್ಲಿ ಭಾರತ ಜಯಭೇರಿ ಬಾರಿಸಿದೆ.
ಇದನ್ನೂ ಓದಿ: ಬುಮ್ರಾ ಬಿಗು ಬೌಲಿಂಗ್ ದಾಳಿಗೆ ದಿಢೀರ್ ಕುಸಿದ ಆಸ್ಟ್ರೇಲಿಯಾ: ಒಂದು ಇನ್ನಿಂಗ್ಸ್, ಹಲವು ದಾಖಲೆ