ಮೈಸೂರು: ಕ್ರೀಡಾ ಕ್ಷೇತ್ರ ಹಾಗೂ ಕ್ರೀಡಾಪಟುಗಳ ಬಗ್ಗೆ ಸರ್ಕಾರದ ಧೋರಣೆ ಸರಿಯಿಲ್ಲ ಎಂದು ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತರಾದ ಮಾಜಿ ವೇಟ್ ಲಿಫ್ಟರ್ ಪುಷ್ಪರಾಜ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಹಾಗೂ ಜಿಲ್ಲಾ ವೇಟ್ ಲಿಫ್ಟರ್ಸ್ ಸಂಸ್ಥೆ, ಫಿಸಿಕಲ್ ಎಜುಕೇಷನ್ ಟೀಚರ್ಸ್ ಅಕಾಡೆಮಿ ಟ್ರಸ್ಟ್, ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ವಿಭಾಗದ ವತಿಯಿಂದ, ನಗರರದ ಡಾ.ಎಪಿಜೆ ಅಬ್ದುಲ್ ಕಲಾಂ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ರಾಜ್ಯ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಗೆ ಮತ್ತು ಕ್ರೀಡಾಪಟುಗಳಿಗೆ ಸವಲತ್ತು ಕೊಡುವುದು ಬರೀ ಶೂನ್ಯ ಮಾತ್ರ. ಕ್ರೀಡೆ ಬಗ್ಗೆ ಧೋರಣೆ ಸರಿಯಿಲ್ಲ. ಮೂಲಸೌಲಭ್ಯ ಕೊಡುವಲ್ಲಿ ನಾವು ಎಡವಿದ್ದೇವೆ. ಇನ್ನಾದರೂ ಕ್ರೀಡಾ ಕ್ಷೇತ್ರವನ್ನು ದೇಶ ಆದ್ಯತೆ ಮೇರೆಗೆ ತೆಗೆದುಕೊಂಡು ಹೋಗಬೇಕು. ಕ್ರೀಡೆಗೆ ಉತ್ತೇಜನ ಸಿಕ್ಕಿದರೆ ಆರೋಗ್ಯಕ್ಕೆ ಉತ್ತೇಜನ ಸಿಕ್ಕಿದಂತೆ ಎಂದರು.
ಭಾರ ಎತ್ತುವ ಸ್ಪರ್ಧೆ ತುಂಬಾ ಕಠಿಣವಾದ ಕ್ರೀಡೆ. ಅದನ್ನು ಕಷ್ಟಪಟ್ಟು ಪೋಷಿಸಬೇಕು. ಮೈಸೂರು ಸಂಸ್ಥೆಯು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಸ್ಪರ್ಧೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಆಯೋಜಿಸುವ ಮೂಲಕ ಉತ್ತಮ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.
ಪ್ರತಿಯೊಬ್ಬರೂ ಕೂಡ ಓದಿನ ಜೊತೆಗೆ ಒಂದು ಗಂಟೆ ವ್ಯಾಯಾಮಕ್ಕೆ ಮೀಸಲಿಡಬೇಕು. ಇದರಿಂದ ಆರೋಗ್ಯಕರ ಜೀವನ ಸಾಗಿಸಬಹುದು ಎಂದ ಅವರು, ಭಾರ ಎತ್ತುವ ಸ್ಪರ್ಧೆಗೆ ತರಬೇತುದಾರರ ಕೊರತೆ ಇದೆ. ಬೆಳಗಾವಿ, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಮಾತ್ರ ತಲಾ ಒಬ್ಬರು ತರಬೇತುದಾರರಿದ್ದಾರೆ. ಈ ಸಂಖ್ಯೆ ಹೆಚ್ಚಾಗಬೇಕು. ಸಂಬಂಧಪಟ್ಟ ಇಲಾಖೆಯ ಗಮನ ಸೆಳೆಯಬೇಕು ಎಂದರು.
ಯಾವುದೇ ಸ್ಪರ್ಧೆ ಇರಲಿ, ಕ್ರೀಡಾಪಟುಗಳು ಶಿಸ್ತಿನಿಂದ ಭಾಗವಹಿಸಬೇಕು. ಅದರ ಜೊತೆ ರಾಜಿಯಾಗಬಾರದು. ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ಅಡ್ಡದಾರಿಗಳಿಂದ ಬರುವ ಯಶಸ್ಸು ಅಲ್ಪಕಾಲದ್ದು ಎಂದು ಅವರು ಹೇಳಿದರು.
ಕ್ರೀಡಾಪಟುಗಳಿಗೆ ಹೆಚ್ಚು ಸಹಾಯ, ಹೆಚ್ಚಿನ ಅಂಕ ಕೊಡಿಸುವ ಬಗ್ಗೆ ಗಮನ ನೀಡಬೇಕು ಎಂದು ಅವರು ತಿಳಿಸಿದರು. ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಶಾಖೆಯ ಗೌರವ ಕಾರ್ಯದರ್ಶಿ ಎಸ್.ಹೆಚ್. ಆನಂದೇಗೌಡ ಮಾತನಾಡಿ, ಇಡೀ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇತಿಹಾಸದಲ್ಲಿ ಉಳಿಯುವ ರೀತಿಯಲ್ಲಿ ಭಾರ ಎತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಕ್ರೀಡೆಯನ್ನು ಬೆಳೆಸಬೇಕು. ಕ್ರೀಡೆಯಲ್ಲಿ ಸೋಲು- ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ ಎಂದರು.
ಜಿಲ್ಲಾ ವೇಟ್ ಲಿಫ್ಟರ್ಸ್ ಸಂಸ್ಥೆಯ ಗೌರವಾಧ್ಯಕ್ಷ ಪ್ರೊ. ಕೆ. ಸೌಮ್ಯಾ ಈರಪ್ಪ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು ಮತ್ತು ತಾಳ್ಮೆ ಮುಖ್ಯ. ಮಹಾಜನ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ಕ್ರೀಡೆಯಲ್ಲಿ ಸತತ ಪ್ರಯತ್ನ, ಬದ್ಧತೆ ಮತ್ತು ಶಿಸ್ತು ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸಿ. ಕೃಷ್ಣ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ನಿಯಮಾವಳಿಗೆ ಅನುಗುಣವಾಗಿ ಈ ಸ್ಪರ್ಧೆ ಆಯೋಜಿಸಲಾಗಿದೆ. ತಾಂತ್ರಿಕ ನಿಯಮಗಳನ್ನು ಪಾಲಿಸಲಾಗಿದೆ ಎಂದರು.
ಎರಡು ದಿನಗಳು ನಡೆಯುವ ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿರುವ 250 ಮಂದಿ ಪಾಲ್ಗೊಂಡಿದ್ದಾರೆ.