ಡಲ್ಲಾಸ್ (ಯುಎಸ್): ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್ 2024ರ 11ನೇ ಪಂದ್ಯದ ರೋಚಕ ಸೂಪರ್ ಓವರ್‌ನಲ್ಲಿ ಪಾಕಿಸ್ತಾನದ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಐತಿಹಾಸಿಕ ಗೆಲುವು ಸಾಧಿಸಿದೆ. 160 ರನ್ ಗುರಿ ಬೆನ್ನಟ್ಟಿದ ಯುಎಸ್, ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾಯಿತು. ಬಳಿಕ ಸೂಪರ್ ಓವರ್‌ನಲ್ಲಿ ಗೆದ್ದು ಪಾಕ್ಗೆ ಶಾಕ್ ನೀಡಿದೆ.
ಇದಕ್ಕೂ ಮುನ್ನ ಟಾಸ್ ಗೆದ್ದ ಯುಎಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ಗಿಳಿದ ಪಾಕ್ಗೆ ಆರಂಭದಲ್ಲೇ ಆಘಾತ ಎದುರಾಯಿತು. 26 ರನ್ ಆಗುವಷ್ಟರಲ್ಲಿ ಪ್ರಮುಖ ಮೂವರು ಬ್ಯಾಟರ್ಗಳು ಪೆವಿಲಿಯನ್ ಸೇರಿಕೊಂಡರು. ಮೊಹಮದ್ ರಿಜ್ವಾನ್ 9, ಉಸ್ಮಾನ್ ಖಾನ್ 3 ಹಾಗೂ ಫಖರ್ ಜಮಾನ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ಒಂದಾದ ನಾಯಕ ಬಾಬರ್ ಅಜಂ (44) ಹಾಗೂ ಆಲ್ರೌಂಡರ್ ಶದಾಬ್ ಖಾನ್ (40 ರನ್, 25 ಎಸೆತ) ತಂಡಕ್ಕೆ ಚೇತರಿಕೆ ನೀಡಿದರು. ಬಾಬರ್ ನಿಧಾನಗತಿಯ ಆಟವಾಡಿದರೆ, ಶದಾಬ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಜೋಡಿ ನಾಲ್ಕನೇ ವಿಕೆಟ್ಗೆ 72 ರನ್ ಸೇರಿಸಿತು. ಶದಾಬ್ ವಿಕೆಟ್ ಪತನದ ಬಳಿಕ ಅಜಂ ಖಾನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ ಇಫ್ತಿಕಾರ್ ಅಹಮದ್ 18 ಹಾಗೂ ಶಾಹೀನ್ ಅಫ್ರಿದಿ ಅವರ 23 ರನ್ ಕೊಡುಗೆಯಿಂದ ಪಾಕ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಪೇರಿಸಿತು.
160 ರನ್ ಬೆನ್ನಟ್ಟಿದ ಯುಎಸ್ನ ಎಲ್ಲ ಬ್ಯಾಟರ್ಗಳೂ ಪಾಕ್ ಬೌಲರ್ಗಳೆದರು ಉತ್ತಮ ಆಟ ಪ್ರದರ್ಶಿಸಿ ಎರಡಂಕಿ ಮೊತ್ತ ದಾಟಿದರು. ಮೊದಲ ವಿಕೆಟ್ಗೆ ಸ್ಟಿವನ್ ಟೇಲರ್ (12) ಹಾಗೂ ನಾಯಕ ಮೊನಾಕ್ ಪಟೇಲ್ (50) 36 ರನ್ ಸೇರಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್ ತೋರಿದ ಮೊನಾಕ್ 38 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.
ಟೇಲರ್ ಔಟಾದ ಬಳಿಕ ಬಂದ ಅಂಡ್ರೀಸ್ ಗೌಸ್ 26 ಬಾಲ್ಗಳಲ್ಲಿ 35 ರನ್ ಸಿಡಿಸಿ, ನಾಯಕನಿಗೆ ತಕ್ಕ ಸಾಥ್ ನೀಡಿದರು. ತದನಂತರ ಆರೋನ್ ಜೋನ್ಸ್ ಅಜೇಯ 36 ರನ್ ಗಳಿಸಿದರೆ, ನಾಯಕನ ವಿಕೆಟ್ ಪತನದ ಬಳಿಕ ಬಂದ ನಿತೀಶ್ ಕುಮಾರ್ 14 ರನ್ ಗಳಿಸಿ ಅಜೇಯರಾಗುಳಿದರು. ಕೊನೆಯ ಓವರ್‌ನಲ್ಲಿ 15 ರನ್ ಅತ್ಯವಿತ್ತು. ಒಂದು ಸಿಕ್ಸರ್ ಹಾಗೂ ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸಿದ ಯುಎಸ್ 3 ವಿಕೆಟ್ಗೆ 159 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಹೀಗಾಗಿ ಸೂಪರ್ ಓವರ್ ನಡೆಸಲಾಯಿತು.
ಯುಎಸ್ ಸೂಪರ್ ಓವರ್: ಮೊಹಮದ್ ಅಮೀರ್ ಎಸೆದ ಸೂಪರ್ ಓವರ್‌ನಲ್ಲಿ ಯುಎಸ್ಗೆ 18 ರನ್ ಹರಿದು ಬಂದಿತು. ಮೊದಲ ಎಸೆತದಲ್ಲೇ ಜೋನ್ಸ್ ಬೌಂಡರಿ ಬಾರಿಸಿದರು. ನಂತರ ಬಾಲ್ಗಳಲ್ಲಿ 2 ಹಾಗೂ 1 ರನ್ ನೀಡಿದ ಅಮೀರ್, ಬಳಿಕ ಮೂರು ವೈಡ್ ಎಸೆತಗಳಿಂದ ದುಬಾರಿಯಾದರು. ವೈಡ್ಗಳಿಗೆ ಇತರೆ ರನ್ ಗಳಿಸಿದ ಯುಎಸ್ ಒಟ್ಟಾರೆ 18 ರನ್ ಕಲೆ ಹಾಕಿತು.
ಪಾಕ್ ಸೂಪರ್ ಓವರ್: ನೆಟ್ರಾವಲ್ಕರ್ ಮೊದಲಿಗೆ ಡಾಟ್ ಬಾಲ್ ಎಸೆಯುವ ಮೂಲಕ ಯುಎಸ್ಗೆ ಗೆಲುವಿನ ಭರವಸೆ ಮೂಡಿಸಿದರು. ಬಳಿಕ ಎರಡನೇ ಎಸೆತದಲ್ಲಿ ಇಫ್ತಿಕಾರ್ ಬೌಂಡರಿ ಬಾರಿಸಿದರು. 3ನೇ ಬಾಲ್ ವೈಡ್ ಆಗಿದ್ದರಿಂದ ಪಾಕ್ಗೆ 4 ಎಸೆತಗಳಲ್ಲಿ 14 ರನ್ ಬೇಕಿತ್ತು. ತದನಂತರದ ಬಾಲ್ನಲ್ಲಿ ಇಫ್ತಿಕಾರ್ ಕ್ಯಾಚ್ ನೀಡಿ ಔಟಾದರು. ಬಳಿಕದ ಬಾಲ್ ವೈಡ್ ಆಗಿದ್ದು, ನಂತರ ಶದಾಬ್ ಬೌಂಡರಿ ಗಿಟ್ಟಿಸಿಕೊಂಡರು. 5ನೇ ಎಸೆತದಲ್ಲಿ ಕೇವಲ 2 ರನ್ ಮಾತ್ರ ಗಳಿಸಿದ್ದರಿಂದ ಕೊನೆಯ ಎಸೆತದಲ್ಲಿ 7 ರನ್ ಅಗತ್ಯವಿತ್ತು. ಆದರೆ, ಕೇವಲ ಒಂದು ರನ್ ಮಾತ್ರ ಬಂದಿದ್ದರಿಂದ ಯುಎಸ್ 5 ರನ್ ಗೆಲುವಿನೊಂದಿಗೆ ಚರಿತ್ರೆ ಸೃಷ್ಟಿಸಿತು.
ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಗೆದ್ದ ಯುಎಸ್, ಇದೀಗ ಪಾಕಿಸ್ತಾನಕ್ಕೆ ಆಘಾತ ನೀಡುವ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿದೆ. ಮುಖಭಂಗ ಅನುಭವಿಸಿದ ಬಾಬರ್ ಪಡೆಗೆ ಮುಂದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಬೇಕಾದ ಅನಿವಾರ್ಯತೆ ಎದುರಾಗಿದೆ.