ಉಡುಪಿ: ಡೆನ್ಮಾರ್ಕ್ನಲ್ಲಿ ಈಚೆಗೆ ನಡೆದ 15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಅಶ್ವಿನ್ ಸನಿಲ್ ಮತ್ತು ಕುಮಟಾ ಅಗ್ನಿಶಾಮಕ ದಳದ ಸಿಬ್ಬಂದಿ ರಾಜೇಶ್ ಮಡಿವಾಳ ಚಿನ್ನದ ಪದಕ ಗೆದ್ದಿದ್ದಾರೆ.
ಅಶ್ವಿನ್ ಸನಿಲ್ 83 ಕೆ.ಜಿ ವಿಭಾಗದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನ, 80 ಕೆ.ಜಿ ಪ್ಲಸ್ ದೇಹದಾಢ್ಯ ಸ್ಪರ್ಧೆಯಲ್ಲಿ ಚಿನ್ನ ಮತ್ತು 100 ಮೀಟರ್ ಓಟ ಸ್ಪರ್ಧೆಯಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಕುಮುಟಾದ ರಾಜೇಶ್ ಮಡಿವಾಳ ಇದೀಗ ಉಡುಪಿಯ ಅಗ್ನಿಶಾಮಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರು 93 ಕೆ.ಜಿ ವಿಭಾಗದ ಪವರ್ ಲಿಫ್ಟಿಂಗ್ನಲ್ಲಿ ಬೆಳ್ಳಿ, 90 ಪ್ಲಸ್ ವಿಭಾಗದ ದೇಹದಾಢ್ಯ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ಸುಮಾರು 50 ದೇಶಗಳ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಹಿಂದೆ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ 13ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟದಲ್ಲಿಯೂ ಈ ಇಬ್ಬರು ಭಾಗವಹಿಸಿದ್ದರು. ಪೋರ್ಚುಗಲ್ನಲ್ಲಿ ನಡೆದಿದ್ದ 14ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟದಲ್ಲಿ ಕೋವಿಡ್ ಮತ್ತು ಇನ್ನಿತರ ಕಾರಣದಿಂದ ಭಾಗವಹಿಸಲು ಸಾಧ್ಯವಾಗಿರಲಿಲ್ಲ.
ಡೆನ್ಮಾರ್ಕ್‌ನಿಂದ ಕ್ರೀಡಾಕೂಟ ಮುಗಿಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇವರನ್ನು ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿ, ಕುಟುಂಬಸ್ಥರು, ಅಭಿಮಾನಿಗಳು ಹೂಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.
ಅಶ್ವಿನ್ ಸನಿಲ್ ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆದ ಸರಕಾರಿ ನೌಕರರ ಹಾಗೂ ಇನ್ನಿತರ ಕ್ರೀಡಾಕೂಟದಲ್ಲಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಇಟಲಿಯಲ್ಲಿ ವಿಶ್ವ ಸ್ಕೇಟ್ ಚಾಂಪಿಯನ್‌ಶಿಪ್: ಭಾರತ ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ ಹುಡುಗಿ - World Skate Championship