ನವದೆಹಲಿ: ಭಾರತದ ಅಂಡರ್-19 ತಂಡ ಈ ಬಾರಿಯೂ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. 2024 ರ ಅಂಡರ್ -19 ವಿಶ್ವಕಪ್ ನಲ್ಲಿ ಈ ಬಾರಿ ಭಾರತದ ಪರವಾಗಿ ತಂಡದ ನಾಯಕ ಉದಯ್ ಸಹರಾನ್ ಅತಿ ಹೆಚ್ಚು ರನ್ಗಳನ್ನು ಕಲೆ ಹಾಕಿ ಗಮನ ಸೆಳೆದಿದ್ದಾರೆ. ಸೆಮಿಫೈನಲ್‌ನಲ್ಲಿ ಆಫ್ರಿಕಾ ವಿರುದ್ಧ 81 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೀಂ ಅಂಡರ್ 19 ಫೈನಲ್‌ಗೆ ಲಗ್ಗೆ ಇಟ್ಟಿದೆ. ಇನ್ನು ಭಾರತದ ಕಿರಿಯರ ತಂಡ ಫೆಬ್ರವರಿ 11 ರಂದು ಆಸ್ಟ್ರೇಲಿಯಾ ಅಥವಾ ಪಾಕಿಸ್ತಾನ ತಂಡವನ್ನು ಫೈನಲ್ನಲ್ಲಿ ಎದುರಿಸಲಿದೆ. ನಾಯಕ ಉದಯ್ ಸಹರಾನ್ ಈ ವಿಶ್ವಕಪ್‌ನ 6 ಪಂದ್ಯಗಳಲ್ಲಿ 4 ರಲ್ಲಿ ದೊಡ್ಡ ಮತ್ತು ಪ್ರಮುಖ ಇನ್ನಿಂಗ್ಸ್ ಕಟ್ಟಿಕೊಟ್ಟಿದ್ದಾರೆ.
ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸಹರಾನ್ 64 ರನ್‌ಗಳ ಇನ್ನಿಂಗ್ಸ್ ಕಟ್ಟಿಕೊಟ್ಟಿದ್ದರು. ಆ ಪಂದ್ಯದಲ್ಲಿ ಭಾರತ ತಂಡ 84 ರನ್‌ಗಳ ಜಯ ಸಾಧಿಸಿತ್ತು. ಇದಾದ ಬಳಿಕ ಸಹರಾನ್ ಐರ್ಲೆಂಡ್ ವಿರುದ್ಧ ಪ್ರಮುಖ 75 ರನ್‌ಗಳ ಕೊಡುಗೆ ನೀಡಿದ್ದರು. ವಿಶ್ವಕಪ್‌ನ ಮೂರು ಮತ್ತು ನಾಲ್ಕನೇ ಪಂದ್ಯಗಳಲ್ಲಿ ಅಮೆರಿಕ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ದ ದೊಡ್ಡ ಇನ್ನಿಂಗ್ಸ್ ಕಟ್ಟಿಕೊಡಲು ಸಹರಾನ್ಗೆ ಸಾಧ್ಯವಾಗಿರಲಿಲ್ಲ. ಆದಾಗ್ಯೂ, ಅವರು ಅಮೆರಿಕದ ವಿರುದ್ಧ 35 ಮತ್ತು ನ್ಯೂಜಿಲೆಂಡ್ ವಿರುದ್ಧ 34 ರನ್‌ಗಳ ಕೊಡುಗೆ ನೀಡಿದ್ದರು.
ಸೂಪರ್ ಸಿಕ್ಸ್ ಪಂದ್ಯದಲ್ಲಿ ನಾಯಕ ಉದಯ್ ಸಹರಾನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ನೇಪಾಳ ತಂಡದ ವಿರುದ್ಧ ಶತಕ ಬಾರಿಸುವ ಮೂಲಕ ಭಾರತ 132 ರನ್‌ಗಳಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿ ಆಗಿತ್ತು. ಇನ್ನು ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ನಿರ್ಣಾಯಕ ಸಮಯದಲ್ಲಿ ಸಹರಾನ್ ತಂಡಕ್ಕೆ 81 ರನ್‌ಗಳ ಕೊಡುಗೆ ನೀಡುವ ಮೂಲಕ ಫೈನಲ್‌ಗೆ ಎಂಟ್ರಿ ಕೊಡಿಸುವಲ್ಲಿ ನೆರವಾದರು. ಈ ಇನ್ನಿಂಗ್ಸ್‌ನೊಂದಿಗೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಉದಯ್ ಪಾತ್ರರಾಗಿದ್ದಾರೆ. ಅವರು 6 ಪಂದ್ಯಗಳಲ್ಲಿ 64.83 ಸರಾಸರಿಯಲ್ಲಿ 389 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಮುಶೀರ್ ಖಾನ್ 331 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದರು.
ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ 31 ರನ್‌ಗಳ ಒಳಗೆ 4 ವಿಕೆಟ್ ಕಳೆದುಕೊಂಡಿದ್ದ ಸಮಯದಲ್ಲಿ ನಾಯಕ ಉದಯ್ ಸಹರಾನ್ ಅವರ ಇನ್ನಿಂಗ್ಸ್ ಬಂದಿದ್ದು ವಿಶೇಷ. ಇವರೊಂದಿಗೆ ಕಳೆದ ಪಂದ್ಯದ ಶತಕ ವಿಜೇತ ಸಚಿನ್ ದಾಸ್ ಕೂಡ 95 ರನ್ ಗಳ ಕೊಡುಗೆ ನೀಡಿದ್ದರು. ದಾಸ್ ಕೇವಲ 5 ರನ್‌ಗಳಿಂದ ಶತಕ ವಂಚಿತರಾದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಇನ್ನಿಂಗ್ಸ್‌ನಿಂದಾಗಿ ಭಾರತ 49ನೇ ಓವರ್‌ನಲ್ಲಿ ಆಫ್ರಿಕಾ ನೀಡಿದ 245 ರನ್‌ಗಳ ಗುರಿಯನ್ನು 7 ಎಸೆತಗಳು ಬಾಕಿ ಇರುವಂತೆಯೇ ಸಾಧಿಸುವ ಮೂಲಕ ಅಂತಿಮ ಘಟ್ಟಕ್ಕೆ ಎಂಟ್ರಿ ಪಡೆಯುವಲ್ಲಿ ಯಶಸ್ವಿಯಾದರು.