ನವದೆಹಲಿ: ಮುಂಬೈ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ತಮಿಳುನಾಡು ತಂಡದ ನಾಯಕ ಆರ್.ಸಾಯಿ ಕಿಶೋರ್ ಅವರ ನಿರ್ಧಾರದ ಬಗ್ಗೆ ತಂಡದ ಕೋಚ್ ಸುಲಕ್ಷಣ್ ಕುಲಕರ್ಣಿ ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಸೋಲಿಗೆ ನಾಯಕನ ಈ ತೀರ್ಮಾನವೇ ಕಾರಣ ಎಂಬ ರೀತಿಯಲ್ಲಿ ಕೋಚ್ ಹೇಳಿಕೆ ಬಗ್ಗೆ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕಿಡಿಕಾರಿದ್ದಾರೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ)ನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿಯ ಸೆಮಿಫೈನಲ್‌ನಲ್ಲಿ ಮುಂಬೈ ವಿರುದ್ಧ ತಮಿಳುನಾಡು ಹೀನಾಯ ಸೋಲು ಕಂಡಿದೆ. ಇನಿಂಗ್ಸ್ ಹಾಗೂ 70 ರನ್ಗಳಿಂದ ಗೆಲುವು ಸಾಧಿಸಿದ ಮುಂಬೈ 48ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಆದರೆ, ಇದೀಗ ಟಾಸ್ ಗೆದ್ದ ಬಳಿಕ ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ನಾಯಕ ಆರ್.ಸಾಯಿ ಕಿಶೋರ್ ವಿರುದ್ಧ ತಮಿಳುನಾಡು ತಂಡದ ಸುಲಕ್ಷಣ್ ಕುಲಕರ್ಣಿ ಅಸಮಾಧಾನ ಹೊರಹಾಕಿದ್ದಾರೆ.
ಪಂದ್ಯದ ನಂತರ ಕೋಚ್ ಸುಲಕ್ಷಣ್ ಕುಲಕರ್ಣಿ ಮಾತನಾಡಿ, ಮೊದಲು ಬ್ಯಾಟಿಂಗ್ ಮಾಡುವ ನಾಯಕ ಆರ್.ಸಾಯಿ ಕಿಶೋರ್ ನಿರ್ಧಾರವನ್ನು ಟೀಕಿಸಿದ್ದಾರೆ. ನಾನು ಯಾವಾಗಲೂ ನೇರವಾಗಿ ಮಾತನಾಡುತ್ತೇನೆ. ನಾವು ಟಾಸ್ ಗೆದ್ದಿದ್ದೆವು. ಕೋಚ್ ಆಗಿ, ಮುಂಬೈಕರ್ ಆಗಿ ನನಗೆ ಪರಿಸ್ಥಿತಿಗಳು ಚೆನ್ನಾಗಿ ತಿಳಿದಿತ್ತು. ನಾವು ಬೌಲಿಂಗ್ ಮಾಡಬೇಕಿತ್ತು. ಆದರೆ, ನಾಯಕ ವಿಭಿನ್ನ ಪ್ರವೃತ್ತಿ ತಾಳಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೋಚ್ ಹೇಳಿಕೆಯನ್ನು ಖಂಡಿಸಿರುವ ತಮಿಳುನಾಡಿನ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಇದು ತುಂಬಾ ತಪ್ಪು. 7 ವರ್ಷಗಳ ನಂತರ ತಂಡವನ್ನು ಸೆಮಿಸ್‌ಗೆ ತಂದ ನಾಯಕನನ್ನು ಬೆಂಬಲಿಸುವ ಬದಲು ಕೋಚ್‌ನಿಂದ ಬಂದ ಪ್ರತಿಕ್ರಿಯೆ ತುಂಬಾ ನಿರಾಶಾದಾಯಕವಾಗಿದೆ. ಒಳ್ಳೆಯ ಸಂಗತಿಗಳು ನಡೆಯಲು ಇದು ಆರಂಭ ಎಂದು ಭಾವಿಸಬೇಕು. ಕೋಚ್ ಸಂಪೂರ್ಣವಾಗಿ ತನ್ನ ನಾಯಕ ಮತ್ತು ತಂಡವನ್ನು ಬಸ್ನ ಕೆಳಗೆ ಎಸೆಯುವ ಕೆಲಸ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂಬೈನ ಮಾಜಿ ಬ್ಯಾಟರ್ ಶಿಶಿರ್ ಹತ್ತಂಗಡಿ ಕೂಡ ಕೋಚ್ ಹೇಳಿಕೆಗೆ ಕಟುವಾಗಿ ಟೀಕಿಸಿದ್ದಾರೆ.
ಇನ್ನು, ಮುಂಬೈ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ಕೇವಲ 146 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ನಂತರ ಸಾಯಿ ಕಿಶೋರ್ ಅಮೋಘ ಸ್ಪೆಲ್‌ನಿಂದಾಗಿ ಮುಂಬೈ ಕುಸಿತದ ಅಂಚಿನಲ್ಲಿತ್ತು. ಆದರೆ, ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಭರ್ಜರಿ ಶತಕದ ನೆರವಿನಿಂದ 378 ರನ್ಗಳನ್ನು ಮುಂಬೈ ಪೇರಿಸಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ತಮಿಳುನಾಡು ಮತ್ತೊಮ್ಮೆ ಕುಸಿತವನ್ನು ಅನುಭವಿಸಿತ್ತು. ಇದರ 162 ರನ್‌ಗಳಿಗೆ ಸರ್ವಪತನಗೊಂಡು ಸೋಲು ಅನುಭವಿಸಿತ್ತು.
ಇದನ್ನೂ ಓದಿ: ರಣಜಿ: ತಮಿಳುನಾಡಿಗೆ ಇನಿಂಗ್ಸ್ & 70 ರನ್ ಸೋಲು, 48ನೇ ಸಲ ಫೈನಲ್ಗೇರಿದ ಮುಂಬೈ