ನವದೆಹಲಿ: 2020 ಆಗಸ್ಟ್ 15ರಂದು ಇಡೀ ದೇಶವೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿತ್ತು. ಅದೇ ದಿನ ಸಂಜೆ ಬಂದ ಸುದ್ದಿ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಹೌದು, ಅಂದು ಯಾರೂ ಊಹಿಸದ ನಿರ್ಧಾರವನ್ನು ಟೀಂ ಇಂಡಿಯಾದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೈಗೊಂಡಿದ್ದರು. ಕ್ಯಾಪ್ಟನ್ ಕೂಲ್ ಜನಪ್ರಿಯತೆಯ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಿಂದಿ ಚಿತ್ರದ ಹಾಡಿನೊಂದಿಗೆ, 'ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಯಾವಾಗಲೂ ಚಿರಋಣಿ. ಸಂಜೆ 7:29ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ' ಎಂದು ಶೀರ್ಷಿಕೆ ನೀಡಿದ್ದರು.
ಧೋನಿ ನಿವೃತ್ತಿಯ ಬೆನ್ನಲ್ಲೇ ಎಡಗೈ ಬ್ಯಾಟರ್ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ರೈನಾ ಇನ್‌ಸ್ಟಾ ಖಾತೆಯಲ್ಲಿ, 'ನಿಮ್ಮ (ಧೋನಿ) ಜೊತೆಗೆ ಕ್ರಿಕೆಟ್ನಲ್ಲಿ ಕಳೆದ ಕ್ಷಣಗಳು ಅದ್ಭುತವಾಗಿದ್ದವು. ನಿಮ್ಮ ನಿವೃತ್ತಿ ಪ್ರಯಾಣದಲ್ಲಿ ಭಾಗಿಯಾಗಲು ಬಯಸುತ್ತೇನೆ. ಧನ್ಯವಾದಗಳು, ಜೈ ಹಿಂದ್' ಎಂದು ಬರೆದುಕೊಂಡಿದ್ದರು.
ಧೋನಿ ಮತ್ತು ರೈನಾ ಬೆಸ್ಟ್ ಫ್ರೆಂಡ್ಸ್ ಆಗಿದ್ದವರು. ಇಂದಿಗೂ ಧೋನಿಯನ್ನು 'ಥಲಾ' (ಅಣ್ಣಾ) ಮತ್ತು ರೈನಾರನ್ನು 'ಚಿನ್ನ ಥಲಾ' (ಕಿರಿಯ ಅಣ್ಣಾ) ಎಂದು ಅವರ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ.
MS Dhoni & Suresh Raina retired together " otd in 2020" from international cricket 🇮🇳
— Johns. (@CricCrazyJohns) August 15, 2024
- best friends forever, iconic duo...!!!!! pic.twitter.com/264YnZwEBj
ಆಗಸ್ಟ್ 15ರಂದು ನಿವೃತ್ತಿ ಹೊಂದಲು ಕಾರಣವೇನೆಂಬುದನ್ನು ನಂತರ ರೈನಾ ಮಾಧ್ಯಮಕ್ಕೆ ತಿಳಿಸಿದ್ದರು. ಧೋನಿ ಜೆರ್ಸಿ ಸಂಖ್ಯೆ 7, ತಮ್ಮ ಜರ್ಸಿ ಸಂಖ್ಯೆ 3. ಇವೆರಡನ್ನೂ ಸೇರಿಸಿದರೆ 73 ಸಂಖ್ಯೆ ಬರುತ್ತೆ. 15 ಆಗಸ್ಟ್ 2020ರಂದು ಭಾರತ 73ನೇ ಸ್ವಾತಂತ್ರೋತ್ಸವ ಆಚರಿಸಿತ್ತು. ನಿವೃತ್ತಿಗೆ ಇದಕ್ಕಿಂತ ಉತ್ತಮ ದಿನ ಬೇರಾವುದೂ ಇಲ್ಲ ಎಂದು ತಿಳಿಸಿದ್ದರು.
ಧೋನಿ ದಾಖಲೆಗಳು: ಎಂ.ಎಸ್.ಧೋನಿ 2019ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. 43 ವರ್ಷದ ಧೋನಿ 350 ಏಕದಿನ, 98 ಟಿ20 ಮತ್ತು 90 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಮೂರು ಸ್ವರೂಪಗಳ ಕ್ರಿಕೆಟ್ನಲ್ಲಿ 17,266 ರನ್ ಗಳಿಸಿದ್ದಾರೆ. ಇದರಲ್ಲಿ 108 ಅರ್ಧ ಶತಕ ಮತ್ತು 16 ಶತಕಗಳಿವೆ. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಂಡಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.
ರೈನಾ ದಾಖಲೆಗಳು: 37 ವರ್ಷದ ರೈನಾ, ಟೀಂ ಇಂಡಿಯಾ ಪರ 226 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 5 ಶತಕಗಳೊಂದಿಗೆ 5,615 ರನ್ ಕಲೆಹಾಕಿದ್ದಾರೆ. 78 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಈ ಎಡಗೈ ಬ್ಯಾಟರ್, 1,604 ರನ್ ಪೇರಿಸಿದ್ದಾರೆ. 18 ಟೆಸ್ಟ್ ಪಂದ್ಯಗಳಲ್ಲಿ ಒಂದು ಶತಕದ ಸಹಾಯದಿಂದ 768 ರನ್ ಗಳಿಸಿದ್ದಾರೆ. ರೈನಾ ಭಾರತದ ಮಧ್ಯಮ ಕ್ರಮಾಂಕದ ಬೆಸ್ಟ್ ಬ್ಯಾಟ್ಸ್‌ಮನ್ ಎಂದೆನಿಸಿಕೊಂಡಿದ್ದರು.