ಐಸಿಸಿ ಟಿ20 ವಿಶ್ವಕಪ್ 2024ರಲ್ಲಿ ಕರ್ನಾಟಕದ ನಂದಿನಿ ಹಾಲು ಉತ್ಪನ್ನ ಬ್ರ್ಯಾಂಡ್ ಸ್ಕಾಟ್ಲೆಂಡ್ ಪುರುಷರ ತಂಡದ ಅಧಿಕೃತ ಪ್ರಾಯೋಜಕತ್ವ ಪಡೆದಿದ್ದು, ಆಟಗಾರರ ಜೆರ್ಸಿ ಬಿಡುಗಡೆಗೊಳಿಸಲಾಗಿದೆ. ಟೂರ್ನಿಯಲ್ಲಿ ಸ್ಕಾಟ್ಲೆಂಡ್ ತಂಡ ಧರಿಸುವ ಜೆರ್ಸಿಯ ತೋಳಿನ ಮೇಲೆ ನಂದಿನಿ ಬ್ರ್ಯಾಂಡ್‌ನ ಲೋಗೋ ರಾರಾಜಿಸುತ್ತಿದೆ.
ನೂತನ ಒಪ್ಪಂದದ ಕುರಿತು ಪ್ರತಿಕ್ರಿಯಿಸಿರುವ ಕ್ರಿಕೆಟ್ ಸ್ಕಾಟ್ಲೆಂಡ್‌ನ ಕಮರ್ಷಿಯಲ್ ಮ್ಯಾನೇಜರ್ ಕ್ಲೇರ್ ಡ್ರುಮಾಂಡ್, ''ಜಾಗತಿಕ ಟೂರ್ನಿಯಲ್ಲಿ ವಿಶ್ವದರ್ಜೆಯ ಆಟಗಾರರ ವಿರುದ್ಧ ಸ್ಪರ್ಧಿಸುತ್ತಿರುವ ನಮ್ಮ ತಂಡ ಅತ್ಯುತ್ತಮವಾಗಿ ಸ್ಥಾಪಿತವಾದ ನಂದಿನಿ ಬ್ರ್ಯಾಂಡ್ ಅನ್ನು ಜರ್ಸಿಯಲ್ಲಿ ಹೊಂದಿರಲಿದೆ. ಈ ಪಾಲುದಾರಿಕೆಯು ನಮ್ಮ ರಾಷ್ಟ್ರೀಯ ತಂಡ ಮತ್ತು ಕ್ರಿಕೆಟ್ ಸ್ಕಾಟ್ಲೆಂಡ್‌ನ ಜಾಗತಿಕ ಆಕರ್ಷಣೆಯನ್ನು ಪ್ರದರ್ಶಿಸುವ ವಿಶ್ವಾಸವಿದೆ'' ಎಂದಿದ್ದಾರೆ.
''ಮುಂದಿನ ದಿನಗಳಲ್ಲಿಯೂ ನಂದಿನಿ ಮತ್ತು ಅದರ ಉತ್ಪನ್ನಗಳ ಪ್ರಚಾರ ಹಾಗೂ ಸ್ಕಾಟ್ಲೆಂಡ್ ಕ್ರಿಕೆಟ್‌ನ ಏಳಿಗೆಯನ್ನು ನಾವು ಎದುರು ನೋಡುತ್ತಿದ್ದೇವೆ. ಇಂಗ್ಲೆಂಡ್, ನಮೀಬಿಯಾ, ಒಮಾನ್ ಹಾಗೂ ಆಸ್ಟ್ರೇಲಿಯಾದ ತಂಡಗಳ ಎದುರು ಕಣಕ್ಕಿಳಿಯುವಾಗ ನಂದಿನಿ ಲೋಗೋ ಹೊಂದಿರುವ ಸ್ಕಾಟ್ಲೆಂಡ್ ತಂಡದ ಜೆರ್ಸಿ ಕಂಗೊಳಿಸಲಿದೆ'' ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕರ್ನಾಟಕ ಹಾಲು ಉತ್ಪಾದಕ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಪ್ರತಿಕ್ರಿಯಿಸಿ, ''ಟಿ20 ವಿಶ್ವಕಪ್‌ನಲ್ಲಿ ಸ್ಕಾಟ್ಲೆಂಡ್ ತಂಡದ ಅಭಿಯಾನದಲ್ಲಿ ಪಾಲುದಾರಿಕೆ ಹೊಂದಿರುವುದು ಸಂತಸವಾಗಿದೆ. ನಂದಿನಿಯು ಒಂದು ಬ್ರ್ಯಾಂಡ್ ಆಗಿ ಶ್ರೇಷ್ಠತೆ ಹಾಗೂ ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಮತ್ತು ಕಳೆದ 40 ವರ್ಷಗಳಲ್ಲಿ ನಾವು ಜಾಗತಿಕ ಬ್ರ್ಯಾಂಡ್ ಆಗಿ ಬೆಳೆದಿದ್ದೇವೆ'' ಎಂದರು.
''ಈ ವಿಶ್ವಕಪ್‌ನಲ್ಲಿ ಕ್ರಿಕೆಟ್ ಸ್ಕಾಟ್ಲೆಂಡ್ ಜೊತೆಗಿನ ನಮ್ಮ ಪಾಲುದಾರಿಕೆಯಿಂದ ನಂದಿನಿ ಬ್ರ್ಯಾಂಡ್ ಜಾಗತಿಕ ಪ್ರೇಕ್ಷಕರನ್ನು ತಲುಪಲು ಸಹಾಯವಾಗಲಿದೆ. ನಮ್ಮ ಬ್ರ್ಯಾಂಡ್ ಅನ್ನು ವಿಶ್ವದಾದ್ಯಂತ ಹೆಚ್ಚಿನ ದೇಶಗಳಿಗೆ ಕೊಂಡೊಯ್ಯುವಲ್ಲಿ ಇದು ಮೊದಲ ಹೆಜ್ಜೆಯಾಗಿದೆ. ಭಾರತದ ಎರಡನೇ ಅತಿ ದೊಡ್ಡ ಡೈರಿ ಬ್ರ್ಯಾಂಡ್ ಆಗಿ, ಭಾರತ ಮತ್ತು ಜಗತ್ತಿಗೆ ಪೌಷ್ಟಿಕ ಹಾಗೂ ಗುಣಮಟ್ಟದ ಡೈರಿ ಉತ್ಪನ್ನಗಳನ್ನು ಪೂರೈಸುವ ನಮ್ಮ ಬದ್ಧತೆಯನ್ನು ನಾವು ನಿರಂತರವಾಗಿ ಬಲಪಡಿಸಲು ನೋಡುತ್ತಿದ್ದೇವೆ'' ಎಂದು ತಿಳಿಸಿದರು.
ಇದೇ ವೇಳೆ ಟಿ20 ವಿಶ್ವಕಪ್‌ನಲ್ಲಿ ಧರಿಸಲಿರುವ ನೂತನ ಜರ್ಸಿಯನ್ನು ಸ್ಕಾಟ್ಲೆಂಡ್ ಆಟಗಾರರು ಎಡಿನ್‌ಬರ್ಗ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ನೂತನ ಜರ್ಸಿಯು ಕ್ರಿಕೆಟ್ ಅಭಿಮಾನಿಗಳ ಖರೀದಿಗೆ ಲಭ್ಯವಿದೆ ಎಂದು ತಿಳಿಸಲಾಗಿದೆ.
ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ಜಂಟಿಯಾಗಿ ಆತಿಥ್ಯ ವಹಿಸುತ್ತಿರುವ ಟಿ20 ವಿಶ್ವಕಪ್ ಜೂನ್ 2ರಿಂದ ಆರಂಭವಾಗಲಿದೆ. ಗ್ರೂಪ್ ಬಿ ನಲ್ಲಿರುವ ಸ್ಕಾಟ್ಲೆಂಡ್ ತಂಡ ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ ಹಾಗೂ ಒಮಾನ್ ತಂಡಗಳ ವಿರುದ್ಧ ಸೆಣಸಾಡಲಿದೆ. ಜೂನ್ 4ರಂದು ಬಾರ್ಬಡೋಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಸ್ಕಾಟ್ಲೆಂಡ್ ತನ್ನ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ: ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್, ಥಿಯೇಟರ್‌ಗಳಲ್ಲಿ T20 ವಿಶ್ವಕಪ್ ಪಂದ್ಯಗಳು!