ಹೈದರಾಬಾದ್: ಟೀಂ ಇಂಡಿಯಾದ ಮೀಸಲು ಆಟಗಾರರಾಗಿ ಸ್ಥಾನ ಪಡೆದಿರುವ ಯುವ ಬ್ಯಾಟ್ಸಮನ್ ರಿಂಕು ಸಿಂಗ್ ನ್ಯೂಯಾರ್ಕ್‌ಗೆ ಬಂದಿಳಿದಿದ್ದಾರೆ. ಈಗಾಗಲೇ ನ್ಯೂಯಾರ್ಕ್‌ಗೆ ಬಂದಿಳಿದಿದ್ದ ಕುಲದೀಪ್ ಯಾದವ್ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ಭೇಟಿ ಮಾಡಿರುವ ರಿಂಕು, ಇನ್‌ಸ್ಟಾಗ್ರಾಮ್ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಮಾರ್ಕ್ಯೂ ಈವೆಂಟ್ ಹಿನ್ನೆಲೆ ಅಮೆರಿಕದಲ್ಲಿರುವ ತಮ್ಮ ಸಹ ಆಟಗಾರರನ್ನು ಭೇಟಿಯಾಗಿರುವುದಾಗಿ ರಿಂಕು ಸಿಂಗ್ ತಿಳಿಸಿದ್ದಾರೆ. ನೆಟಿಜನ್ಸ್ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಇನ್ನೂ ಕೆಲವರು ತಂಡದ 15 ಸದಸ್ಯರಲ್ಲಿ ರಿಂಕು ಹೆಸರು ಸೇರ್ಪಡೆಯಾಗದ್ದಕ್ಕೆ ಬೇಸರ ಹೊರಹಾಕಿದ್ದಾರೆ. T20 ವಿಶ್ವಕಪ್‌ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತದ 15 ಸದಸ್ಯರ ತಂಡವನ್ನು ಈಗಾಗಲೇ ಪ್ರಕಟಿಸಿದ್ದು, ರಿಂಕು ಸಿಂಗ್, ಶುಭಮನ್ ಗಿಲ್, ಖಲೀಲ್ ಅಹ್ಮದ್, ಅವೇಶ್ ಖಾನ್ ಅವರನ್ನು ಮೀಸಲು ಆಟಗಾರರ ಪಟ್ಟಿಯಲ್ಲಿ ಸೇರಿಸಿದೆ. ಇತ್ತೀಚೆಗೆ ಪೂರ್ಣಗೊಂಡ ಐಪಿಎಲ್ನಲ್ಲಿ ರಿಂಕು ಉತ್ತಮ ಪ್ರದರ್ಶನ ತೋರಿದ್ದರು. ಅದರ ಹೊರತಾಗಿಯೂ ಅವರ ಹೆಸರನ್ನು ಚುಟುಕು ವಿಶ್ವಕಪ್ಗೆ 15 ಸದಸ್ಯರ ಬಳಗದಿಂದ ಕೈಬಿಟ್ಟಿದ್ದಕ್ಕೆ ಹಲವರು ಬೇಸರ ಹೊರಹಾಕಿದ್ದರು. ಮುಖ್ಯ ತಂಡದಿಂದ ರಿಂಕು ಅವರನ್ನು ಕೈಬಿಡಲಾಗಿದೆ ಎಂಬ ಸುದ್ದಿ ಗೊತ್ತಾದ ತಕ್ಷಣ ಹಲವು ತಜ್ಞರು ಬಿಸಿಸಿಐ ನಿರ್ಧಾರದ ಬಗ್ಗೆ ಕಿಡಿಕಾರಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಸದ್ಯ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಅವರೊಂದಿಗಿನ ಸೆಲ್ಫಿ ಫೋಟೋ ಅಪ್‌ಲೋಡ್ ಮಾಡಿರುವ ರಿಂಕು, ತಂಡದ ಆಟಗಾರರೊಂದಿಗೆ ಮಾರ್ಕ್ಯೂ ಪಂದ್ಯಾವಳಿಗೆ ತಯಾರಿ ನಡೆಸಲು ಯುಎಸ್‌ಎಗೆ ಆಗಮಿಸಿರುವುದಾಗಿ ತಿಳಿಸಿದ್ದಾರೆ. ಬಹು ನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿಗಾಗಿ ಭಾರತ ತಂಡ ಎರಡು ಬ್ಯಾಚ್ ಮೂಲಕ ಅಮೆರಿಕವನ್ನು ತಲುಪಿದೆ. ನಾಯಕ ರೋಹಿತ್ ಶರ್ಮಾ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ನೇತೃತ್ವದಲ್ಲಿ ಟೀಂ ಇಂಡಿಯಾ ಮೊದಲನೇ ಬ್ಯಾಚ್ ಅಮೆರಿಕಕ್ಕೆ ತೆರಳಿದ್ದರೆ, ಎರಡನೆ ಬ್ಯಾಚ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೂವರು ಆಟಗಾರರಾದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಮೀಸಲು ಆಟಗಾರ ವೇಗದ ಬೌಲರ್ ಅವೇಶ್ ಖಾನ್ ಅವರು ತೆರಳಿದ್ದಾರೆ. ರಿಂಕು ಸಿಂಗ್, ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್ ಸೇರಿದಂತೆ ಕೆಲವು ಆಟಗಾರರು ತಂಡವನ್ನು ಸೇರಿಕೊಂಡಿರಲಿಲ್ಲ. ಇದೀಗ ಈ ಪಟ್ಟಿಗೆ ರಿಂಕು ಸಿಂಗ್ ಸೇರಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ತಂಡವನ್ನು ಸೇರ್ಪಡೆಯಾಗಬೇಕಿದೆ.
ಐಪಿಎಲ್ ಫೈನಲ್‌ನಿಂದಾಗಿ ಒಂದೇ ಬ್ಯಾಚ್‌ನೊಂದಿಗೆ ಎಲ್ಲರೂ ಹೊರಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಭಾರತ ತಂಡವನ್ನು ಎರಡು ಬ್ಯಾಚ್‌ಗಳಲ್ಲಿ ಕಳುಹಿಸಲು ಬಿಸಿಸಿಐ ಮುಂದಾಗಿತ್ತು. ಆದಾಗ್ಯೂ, ಎರಡು ಬ್ಯಾಚ್‌ಗಳ ನಂತರವೂ ಎಲ್ಲಾ ಆಟಗಾರರು ನ್ಯೂಯಾರ್ಕ್ ತಲುಪಲು ಸಾಧ್ಯವಾಗಿರಲಿಲ್ಲ. ಜೂನ್ 5 ರಂದು ಐರ್ಲೆಂಡ್ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಭಾರತ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ: 'ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ': ದಾದಾ ಪೋಸ್ಟ್ನ ಗುಟ್ಟೇನು? - GANGULY ON INDIA HEAD COACH