ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ 2024ರ ಲೀಗ್ ಹಂತದ ಪಂದ್ಯದಲ್ಲಿ ಇಂದು (ಭಾನುವಾರ) ಎ ಗುಂಪಿನಲ್ಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ತೀವ್ರ ಹಣಾಹಣಿ ನಿರೀಕ್ಷಿಸಲಾಗಿದೆ. ನ್ಯೂಯಾರ್ಕ್‌ನ ನಸ್ಸೌ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತೀಯ ಕಾಲಮಾನ ರಾತ್ರಿ 8ಕ್ಕೆ ಪಂದ್ಯ ನಡೆಯಲಿದೆ.
ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಬಲಿಷ್ಠವಾಗಿದ್ದರೆ, ಪಾಕಿಸ್ತಾನದ ಶಕ್ತಿ ಬೌಲಿಂಗ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಟ್ ಮತ್ತು ಬಾಲ್ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬರುವ ಸಾಧ್ಯತೆ ಗೋಚರಿಸಿದೆ. ರೋಹಿತ್ ಶರ್ಮಾ ಮತ್ತು ಬಾಬರ್ ಅಜಮ್ ನೇತೃತ್ವದ ತಂಡಗಳು ಮಹತ್ವದ ಪಂದ್ಯ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ತುದಿಗಾಲಲ್ಲಿ ನಿಂತಿವೆ.
ಪಂದ್ಯ ನೋಡುವುದು ಹೇಗೆ?: ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ದೂರದರ್ಶನ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲೂ ಪಂದ್ಯ ನೋಡಬಹುದು.
ಭಾರತ vs ಪಾಕಿಸ್ತಾನ ಹೆಡ್ ಟು ಹೆಡ್ ದಾಖಲೆ: ಭಾರತ-ಪಾಕಿಸ್ತಾನ ನಡುವೆ ಇದುವರೆಗೆ ಒಟ್ಟು 12 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಈ ಪೈಕಿ ಟೀಂ ಇಂಡಿಯಾ 9ರಲ್ಲಿ ಗೆದ್ದರೆ, 3 ಪಂದ್ಯಗಳಲ್ಲಿ ಸೋತಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಕಳೆದ ಐದು ಪಂದ್ಯಗಳಲ್ಲೂ ಟೀಂ ಇಂಡಿಯಾವೇ ಮೇಲುಗೈ ಸಾಧಿಸಿದೆ. ಭಾರತ 3 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಕೇವಲ 2 ಪಂದ್ಯಗಳನ್ನು ಜಯಿಸಿದೆ.
ನಸ್ಸೌ ಸ್ಟೇಡಿಯಂ ಪಿಚ್ ವರದಿ: ನಸ್ಸೌ ಕ್ರಿಕೆಟ್ ಸ್ಟೇಡಿಯಂನ ಪಿಚ್ ಬೌನ್ಸಿ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ ಇಲ್ಲಿ ಬ್ಯಾಟಿಂಗ್ ಸುಲಭವಲ್ಲ. ಈ ಪಿಚ್‌ನಲ್ಲಿ, ಕೆಲವೊಮ್ಮೆ ಚೆಂಡು ವೇಗವಾಗಿ ಬಂದರೆ ಮತ್ತು ಕೆಲವೊಮ್ಮೆ ನಿಧಾನವಾಗಿಯೂ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಟ್ಸ್‌ಮನ್‌ಗಳು ದೊಡ್ಡ ಹೊಡೆತಗಳಿಗೆ ಕೈ ಹಾಕುವುದು ಸವಾಲು. ಈ ಪಿಚ್ ವೇಗದ ಬೌಲರ್‌ಗಳಿಗೆ ನೆರವಾಗುತ್ತದೆ. ವೇಗಿಗಳು ತಮ್ಮ ವೇಗ ಮತ್ತು ಬೌನ್ಸ್‌ನಿಂದ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಬಲ್ಲರು. ಸ್ಪಿನ್ನರ್‌ಗಳಿಗೆ ನೆರವಾಗುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗಿದೆ.
ಭಾರತದ ಬಲ: ಭಾರತ ತಂಡದಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ರೋಹಿತ್ ಶರ್ಮಾ ಐರ್ಲೆಂಡ್ ವಿರುದ್ಧ 52 ರನ್ ಗಳಿಸಿದ್ದರೆ, ರಿಷಬ್ ಪಂತ್ ಅಜೇಯ 36 ರನ್ ಗಳಿಸಿದ್ದರು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಐರ್ಲೆಂಡ್ ವಿರುದ್ಧ 3 ವಿಕೆಟ್ ಪಡೆದಿದ್ದಾರೆ. ಇದಲ್ಲದೇ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ 40 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದ್ದರು. ತಂಡದ ಟ್ರಂಪ್ ಕಾರ್ಡ್ ಜಸ್ಪ್ರೀತ್ ಬುಮ್ರಾ. ಬುಮ್ರಾ ತನ್ನ ಕರಾರುವಾಕ್, ಯಾರ್ಕರ್ ಎಸೆತಗಳಿಂದ ಪಾಕ್ ಬ್ಯಾಟರ್‌ಗಳನ್ನು ಪೇಚಿಗೆ ಸಿಲುಕಿಸಬಹುದು.
ಪಾಕಿಸ್ತಾನದ ಬಲ: ಪಾಕಿಸ್ತಾನ ತಂಡದಲ್ಲಿ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಆಫ್ರಿದಿ ಮತ್ತು ಮೊಹಮ್ಮದ್ ಅಮೀರ್ ಪ್ರಮುಖರು. ಆದರೆ ಯುಎಸ್‌ಎ ವಿರುದ್ಧ ಸೂಪರ್ ಓವರ್‌ನಲ್ಲಿ ತಂಡ ಸೋತು ಮುಖಭಂದ ಅನುಭವಿಸಿದೆ. ಇಂದು ಈ ಆಟಗಾರರು ಭಾರತದ ವಿರುದ್ಧ ಪ್ರಬಲ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ. ಕಳೆದ ಪಂದ್ಯದಲ್ಲಿ ಬಾಬರ್ 44 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಆದರೆ ಮೊಹಮ್ಮದ್ ರಿಜ್ವಾನ್ ವಿಫಲರಾಗಿದ್ದರು. ವೇಗಿ ಶಾಹೀನ್ ಅಫ್ರಿದಿ ಒಂದು ವಿಕೆಟ್ ಕೂಡಾ ಪಡೆಯಲಿಲ್ಲ. ಆದರೆ, ಮೊಹಮ್ಮದ್ ಅಮೀರ್ ಒಂದು ವಿಕೆಟ್ ಉರುಳಿಸಿದ್ದರು. ಇವರಲ್ಲದೆ ಹಾರಿಸ್ ರೌಫ್, ನಸೀಮ್ ಶಾ, ಫಖರ್ ಜಮಾನ್ ಮತ್ತು ಇಫ್ತಿಕರ್ ಅಹಮದ್ ಮೇಲೂ ಕ್ರಿಕೆಟ್ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.
ಭಾರತ-ಪಾಕಿಸ್ತಾನ ತಂಡಗಳು:
- ಭಾರತ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
- ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಅಬ್ರಾರ್ ಅಹ್ಮದ್, ಅಜಮ್ ಖಾನ್, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್- ಬ್ಯಾಟ್ಸ್‌ಮನ್), ಹ್ಯಾರಿಸ್ ರೌಫ್, ಮೊಹಮ್ಮದ್ ಅಮೀರ್, ನಸೀಮ್ ಶಾ, ಶಾದಾಬ್ ಖಾನ್, ಶಾಹೀನ್ ಶಾ ಆಫ್ರಿದಿ.
ಇದನ್ನೂ ಓದಿ: ಟಿ20 ವಿಶ್ವಕಪ್: ಆಸ್ಟ್ರೇಲಿಯಾ ದಿಟ್ಟ ಪ್ರದರ್ಶನಕ್ಕೆ ಶರಣಾದ ಇಂಗ್ಲೆಂಡ್ - Australia Nails England