ನವದೆಹಲಿ: ಜೂನ್ 2 ರಿಂದ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್ ಶುರು ಆಗಲಿದ್ದು, ಈ ಟೂರ್ನಿಗೆ ಪಾಕಿಸ್ತಾನ ಹೊರತು ಪಡಿಸಿ ಈಗಾಗಲೇ 19 ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ. ಪ್ರಕಟಿಸಿರುವ ತಂಡಗಳಲ್ಲಿ ಬದಲಾವಣೆ ಬಯಸಿದ್ದಲ್ಲಿ ಮೇ 25 ರವರೆಗೂ ಅದಕ್ಕೆ ಅವಕಾಶ ಇದೆ. ಈ ಅವಧಿ ಒಳಗೆ ಬದಲಾವಣೆ ಮಾಡಿಕೊಳ್ಳಬಹುದು ಎಂದು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ತಿಳಿಸಿದೆ.
ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ಜೂನ್ 2 ರಿಂದ ಆರಂಭವಾಗುವ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಜೂನ್ 29 ರಂದು ಮುಕ್ತಾಯವಾಗಲಿದೆ. ನಾಲ್ಕು ಗುಂಪು ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಸಹ ಐಸಿಸಿ ಈಗಾಗಲೇ ಪ್ರಕಟಿಸಿದೆ. ಜೂನ್ 1 ರಂದು ಉದ್ಘಾಟನಾ ಪಂದ್ಯ ಆತಿಥೇಯ ಯುಎಸ್ಎ ಹಾಗೂ ಕೆನಡಾ ನಡುವೆ ನಡೆದರೆ, ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.
ಬದಲಾವಣೆಗೆ ಮಾಡಿಕೊಳ್ಳಬಹುದಾದ ದೇಶಗಳು: ಆಡುವ 20 ದೇಶಗಳ ತಂಡಗಳಲ್ಲಿ 19 ದೇಶಗಳು ಈಗಾಗಲೇ ತಮ್ಮ ತಂಡವನ್ನು ಪ್ರಕಟಿಸಿವೆ. ಪಾಕಿಸ್ತಾನ ತನ್ನ ತಂಡವನ್ನು ಪ್ರಕಟಿಸಬೇಕಿದೆ. ಪ್ರಕಟಿಸಿರುವ ಪಟ್ಟಿಯಲ್ಲಿ ಬದಲಾವಣೆ ಬಯಸಿದ್ದರೆ ಮೇ 25 ರವರೆಗೆ ಅವಕಾಶ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ.
- ಭಾರತ
- ಪಾಕಿಸ್ತಾನ (ತಂಡವನ್ನು ಪ್ರಕಟಿಸಿಲ್ಲ)
- ಐರ್ಲೆಂಡ್
- ಕೆನಡಾ
- ಯುಎಸ್ಎ
- ಇಂಗ್ಲೆಂಡ್
- ಆಸ್ಟ್ರೇಲಿಯಾ
- ನಮೀಬಿಯಾ
- ಸ್ಕಾಟ್ಲೆಂಡ್
- ಓಮನ್
- ನ್ಯೂಜಿಲ್ಯಾಂಡ್
- ವೆಸ್ಟ್ ಇಂಡೀಸ್
- ಅಫ್ಘಾನಿಸ್ತಾನ
- ಉಗಾಂಡಾ
- ಪಪುವಾ ನ್ಯೂ ಗಿನಿಯಾ
- ದಕ್ಷಿಣ ಆಫ್ರಿಕಾ
- ಶ್ರೀಲಂಕಾ
- ಬಾಂಗ್ಲಾದೇಶ
- ನೆದರ್ಲ್ಯಾಂಡ್ಸ್
- ನೇಪಾಳ
ಬದಲಾವಣೆ ಸಾಧ್ಯತೆ ಇಲ್ಲ: ಬಿಸಿಸಿಐ ಭಾರತ ತಂಡವನ್ನು ಏಪ್ರಿಲ್ 30 ರಂದೇ ಪ್ರಕಟಿಸಿದ್ದು, ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ತಂಡದಲ್ಲಿದ್ದಾರೆ. ಇವರೊಂದಿಗೆ ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ಕಣಕ್ಕಿಳಿಯಲಿದ್ದಾರೆ. ಹಾಗೇ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟರ್ಗಳಾಗಿ ಸಂಜು ಸ್ಯಾಮ್ಸನ್ ಹಾಗೂ ರಿಷಭ್ ಪಂತ್ ಕೂಡ ಕಾಣಿಸಿಕೊಂಡಿದ್ದಾರೆ. ಹೊಸಬರು ಸೇರಿದಂತೆ 15 ಸದಸ್ಯರ ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಎಲ್ಲ ಸ್ಥಾನಗಳು ಭರ್ತಿಯಾಗಿದ್ದರಿಂದ ಬದಲಾವಣೆ ಭಾಗಶಃ ಅಸಾಧ್ಯ.
ಪಾಕ್ ತಂಡ ಪ್ರಕಟ ಯಾವಾಗ?: ಪಾಕಿಸ್ತಾನ ಈವರೆಗೂ ತನ್ನ ತಂಡವನ್ನು ಪ್ರಕಟಿಸಿಲ್ಲ. ಹಾಗಾಗಿ ಇದೊಂದು ದೊಡ್ಡ ಪ್ರಶ್ನೆಯಾಗಿದೆಯೇ ಉಳಿದಿದೆ. ನಾಳೆಯ ಒಳಗೆ (ಮೇ 25) ಪಾಕ್ ತನ್ನ 15 ಸದಸ್ಯರ ತಂಡದ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಲೇಬೇಕು. ಅಂದಾಜಿನ ಪ್ರಕಾರ ಇಂದು ಅಥವಾ ನಾಳೆ ತಂಡ ಪ್ರಕಟವಾಗಲಿದ್ದು ಈ ವಿಶ್ವಕಪ್‌ನಲ್ಲೂ ಬಾಬರ್ ಅಜಮ್ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊಹಮ್ಮದ್ ರಿಜ್ವಾನ್, ಶಾದಾಬ್ ಖಾನ್ ಮತ್ತು ಶಾಹೀನ್ ಅಫ್ರಿದಿ ಅವರಿಗೂ ಪಾಕ್ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಆದರೆ, ಹಸನ್ ಅಲಿ, ಬ್ರಾರ್ ಅಹ್ಮದ್, ಅಬ್ಬಾಸ್ ಅಫ್ರಿದಿಗೆ ಸ್ಥಾನ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ.