ಹೈದರಾಬಾದ್ : ತವರಿನ ಅಂಗಳದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಸನ್ ರೈಸರ್ಸ್ ಹೈದರಾಬಾದ್ ಗೆಲುವಿನ ನಗೆ ಬೀರಿದೆ. ಸಿಎಸ್ಕೆ ನೀಡಿದ 166 ರನ್ಗಳ ಗುರಿಯನ್ನು ಕೇವಲ 18.1 ಓವರ್ಗಳಲ್ಲಿ ಬೆನ್ನಟ್ಟಿದ ಹೈದರಾಬಾದ್ ಅಮೋಘ ಜಯ ದಾಖಲಿಸಿದೆ. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಹೈದರಾಬಾದ್ ಬ್ಯಾಟರ್ಸ್ ತಂಡದ ಗೆಲುವಿಗೆ ಶ್ರಮಿಸಿದರು. ಐಡೆನ್ ಮಾರ್ಕ್ರಾಮ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.
ಉತ್ತಮ ಆರಂಭ ಪಡೆದ ಹೈದರಾಬಾದ್ 2.4 ಓವರ್ಗಳಲ್ಲೇ ಮೊದಲ ವಿಕೆಟ್ಗೆ 46 ರನ್ಗಳನ್ನು ಕಲೆಹಾಕಿತು. ಆರಂಭಿಕರಾದ ಟ್ರಾವಿಸ್ ಹೆಡ್ ಅವರೊಂದಿಗೆ ಅಭಿಷೇಕ್ ಶರ್ಮಾ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ತೋರಿದರು. ಕೇವಲ 12 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿಗಳೊಂದಿಗೆ 37 ರನ್ಗಳಿಗೆ ಔಟ್ ಆದರು. ನಂತರ ಬಂದ ಐಡೆನ್ ಮಾರ್ಕ್ರಾಮ್ ಅವರು ಟ್ರಾವಿಸ್ ಹೆಡ್ ಜೊತೆ ಗೂಡಿ ತಂಡದ ಮೊತ್ತ ನೂರರ ಗಡಿ ದಾಟುವಂತೆ ನೋಡಿ ಕೊಂಡರು.
ಸಿಎಸ್ಕೆ ಬೌಲರ್ಸ್ ಮೇಲೆ ಸವಾರಿ ಮಾಡಿ ಹೆಡ್ ಮತ್ತು ಮಾರ್ಕ್ರಾಮ್ ಜೋಡಿ ಸಿಕ್ಸರ್ ಮತ್ತು ಬೌಂಡರಿಗಳನ್ನು ಸಿಡಿಸಿದರು. ತಂಡವನ್ನು ಗೆಲುವಿನ ದಡದತ್ತ ಕರೆದೊಯ್ಯತ್ತಿದ್ದ ಈ ಜೋಡಿಯನ್ನು ಬೇರ್ಪಡಿಸಲು ಬಂದ ಮಹೇಶ್ ತೀಕ್ಷ್ಣ 31 ರನ್ ಗಳಿಸಿದ ಹೆಡ್ ವಿಕೆಟ್ ಪಡೆದುಕೊಂಡರು. ಇತ್ತ ಅದ್ಭುತ ಇನ್ನಿಂಗ್ಸ್ ಆಡಿ ಹೈದರಾಬಾದ್ ತಂಡಕ್ಕೆ ಆಸರೆಯಾದ ಮಾರ್ಕ್ರಾಮ್ 36 ಎಸೆತಗಳಲ್ಲಿ 51 ರನ್ಗಳಿಸಿ ಅರ್ಧಶತಕ ದಾಖಲಿಸಿ ವಿಕೆಟ್ ನೀಡಿದರು.
ಮಾರ್ಕ್ರಾಮ್ ಅವರ ಹಿಂದಯೇ 18 ರನ್ಗಳ ಕೊಡುಗೆ ನೀಡಿದ ಆಲ್ ರೌಂಡರ್ ಶಹಬಾಜ್ ಅಹಮದ್ ಔಟ್ ಆದರು. ಕೊನೆಯಲ್ಲಿ ಹೆನ್ರಿಕ್ ಕ್ಲಾಸೆನ್ ಮತ್ತು ನಿತೀಶ್ ರೆಡ್ಡಿ ತಾಳ್ಮೆಯಿಂದ ಬ್ಯಾಟ್ ಬೀಸಿದರು. ಈ ಮೂಲಕ ವಿಕೆಟ್ ಕಾಪಾಡಿಕೊಂಡು 10 ಎಸೆತಗಳು ಬಾಕಿ ಇರುವಂತೆಯೇ ಹೈದರಾಬಾದ್ಗೆ ಗೆಲುವು ತಂದುಕೊಟ್ಟರು.
ಚೆನ್ನೈಗಾಗಿ ದೀಪಕ್ ಚಹಾರ್ ಮತ್ತು ಮಹೇಶ್ ಚುರುಕಿನ ಒಂದು ವಿಕೆಟ್ ಪಡೆದರೆ, ತನಗೆ ಸಿಕ್ಕ ಈ ಋತುವಿನ ಮೊದಲ ಪಂದ್ಯದಲ್ಲಿ ಮೊಯಿನ್ ಅಲಿ 2 ವಿಕೆಟ್ ಕಬಳಿಸಿ ಮಿಂಚಿದರು.
ಇದನ್ನೂ ಓದಿ : IPL: ಹೈದರಾಬಾದ್ ಬಿಗು ಬೌಲಿಂಗ್ ದಾಳಿಗೆ ಮಂಕಾದ ಚೆನ್ನೈ; 166 ರನ್ ಟಾರ್ಗೆಟ್ - IPL 2024