ಮುಂಬೈ (ಮಹಾರಾಷ್ಟ್ರ): ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ, ರಣಜಿಯಲ್ಲಿ ಸಾಮರ್ಥ್ಯ ಸಾಬೀತು ಮಾಡಬೇಕು ಎಂಬ ಸೂಚನೆಯನ್ನು ನಿರ್ಲಕ್ಷಿಸಿದ್ದ ಯುವ ಆಟಗಾರರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಕೊನೆಗೂ ಅನಿವಾರ್ಯವಾಗಿ ದೇಶೀಯ ಕ್ರಿಕೆಟ್ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಜ್ಜಾಗಿದ್ದಾರೆ.
ರಣಜಿ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧ ಮಾರ್ಚ್ 2 ರಿಂದ ಆರಂಭವಾಗಲಿರುವ ಸೆಮಿಫೈನಲ್‌ಗಾಗಿ ಮಂಗಳವಾರ ಮುಂಬೈ ಪ್ರಕಟಿಸಿರುವ 16 ಸದಸ್ಯರ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಸ್ಥಾನ ಪಡೆದಿದ್ದಾರೆ.
ಮುಂಬೈನ ಹಿರಿಯ ಆಯ್ಕೆ ಸಮಿತಿ ಅಧ್ಯಕ್ಷ ರಾಜು ಕುಲಕರ್ಣಿ, ಸಂಜಯ್ ಪಾಟೀಲ್, ರವಿ ಠಾಕರ್, ಜೀತೇಂದ್ರ ಠಾಕ್ರೆ ಮತ್ತು ಕಿರಣ್ ಪೊವಾರ್ ಅವರು ತಂಡವನ್ನು ಪ್ರಕಟಿಸಿದ್ದು, ಶ್ರೇಯಸ್ ಅಯ್ಯರ್ಗೆ ಸ್ಥಾನ ನೀಡಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ಶನಿವಾರದಿಂದ ನಡೆಯಲಿರುವ ಸೆಮಿಫೈನಲ್‌ನಲ್ಲಿ ಆಡಲಿದ್ದಾರೆ. ಎಂದು ಎಂಸಿಎ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಕ್ವಾರ್ಟರ್ಫೈನಲ್ ಪಂದ್ಯಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಅವರನ್ನು ಮುಂಬೈ ಸಂಪರ್ಕಿಸಿ ತಂಡದ ಪರ ಆಡುವಂತೆ ಕೋರಿದ್ದರು. ಆದರೆ, ಬೆನ್ನುನೋವಿನ ಕಾರಣ ನೀಡಿ ಆಟದಿಂದ ತಪ್ಪಿಸಿಕೊಂಡಿದ್ದರು. ಆದರೆ, ಇದೀಗ ತಾವು ಫಿಟ್ ಆಗಿದ್ದು, ಆಯ್ಕೆಗೆ ಲಭ್ಯವಿದ್ದೇನೆ ಎಂದು ತಿಳಿಸಿದ್ದಾರೆ. ಶ್ರೇಯಸ್ ರನ್ ಕೊರತೆ ಮತ್ತು ಬೆನ್ನಿಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಪಂದ್ಯಗಳಿಂದ ಹೊರಬಿದ್ದಿದ್ದಾರೆ.
ಡಿವೈ ಪಾಟೀಲ್ ಕ್ರಿಕೆಟ್ನಲ್ಲಿ ಕಿಶನ್: ಮಾನಸಿಕ ಆಯಾಸದ ಹಿನ್ನೆಲೆ ಬಿಡುವು ಪಡೆದಿರುವ ಇಶಾನ್ ಕಿಶನ್ 2 ತಿಂಗಳ ನಂತರ ಕ್ರಿಕೆಟ್ಗೆ ಮರಳುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ 18ನೇ ಡಿ.ವೈ. ಪಾಟೀಲ್ ಟಿ- 20 ಕಪ್‌ನಲ್ಲಿ ರೂಟ್ ಮೊಬೈಲ್ ಲಿಮಿಟೆಡ್ ವಿರುದ್ಧ ಆರ್‌ಬಿಐ ಪರ ಆಡಲಿದ್ದಾರೆ.
ಮಾನಸಿಕ ಒತ್ತಡದಿಂದಾಗಿ ಕ್ರಿಕೆಟ್ನಿಂದ ಬಿಡುವು ಪಡೆದಿದ್ದ ಕಿಶನ್, ವಿದೇಶಕ್ಕೆ ತೆರಳಿ ಸಂತೋಷ ಕೂಟಗಳಲ್ಲಿ ಭಾಗಿಯಾದ ಆರೋಪ ಅವರ ಮೇಲಿದೆ. ಇದರಿಂದ ಕಿಶನ್ ಮತ್ತು ಶ್ರೇಯಸ್ ಅಯ್ಯರ್ಗೆ ರಣಜಿಯಲ್ಲಿ ಆಡಲು ಸೂಚಿಸಲಾಗಿತ್ತು. ಆದರೆ, ಇಬ್ಬರೂ ದೇಶೀಯ ಕ್ರಿಕೆಟ್ನಲ್ಲಿ ಆಡಿರಲಿಲ್ಲ. ಜೊತೆಗೆ ಬಿಸಿಸಿಐ ಆದೇಶವನ್ನೂ ತಿರಸ್ಕರಿಸಿದ್ದರು. ಇದರಿಂದ ಸಿಟ್ಟಾದ ಮಂಡಳಿ, ಇಬ್ಬರ ಗುತ್ತಿಗೆ ಅವಧಿಯನ್ನೇ ರದ್ದು ಮಾಡಿದೆ ಎಂದು ವರದಿಯಾಗಿದೆ. ಕೋಚ್ ರಾಹುಲ್ ದ್ರಾವಿಡ್ ಕೂಡ ಇಬ್ಬರ ಬಗ್ಗೆ ಕೊಂಚ ಅಸಮಾಧಾನಗೊಂಡಿದ್ದರು.
ಇದನ್ನೂ ಓದಿ: ರಣಜಿಯಲ್ಲಿ ಆಡದಿರಲು ಬೆನ್ನುನೋವಿನ ಕಾರಣ ನೀಡಿದರಾ ಶ್ರೇಯಸ್ ಅಯ್ಯರ್; ಎನ್ಸಿಎ ಹೇಳೋದೇನು?