ನವದೆಹಲಿ: ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಿಖರ್ ಧವನ್ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್‌ನಲ್ಲಿ ವಿಡಿಯೋವನ್ನು ಹರಿಬಿಡುವ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದರು. ಈ ವಿಡಿಯೋದಲ್ಲಿ, ತಮ್ಮ ವೃತ್ತಿಜೀವನದಲ್ಲಿ ಬೆಂಬಲಿಸಿದವರಿಗೆ ಧವನ್ ಕೃತಜ್ಞತೆ ಸಲ್ಲಿಸಿದ್ದಾರೆ.
'ನನಗೆ ಒಂದೇ ಒಂದು ಕನಸು ಇತ್ತು. ಅದು ಭಾರತಕ್ಕಾಗಿ ಆಡುವುದಾಗಿತ್ತು. ನಾನು ಅದನ್ನು ಸಾಧಿಸಿದ್ದೇನೆ. ನನ್ನ ಪ್ರಯಾಣಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಮೊದಲನೆಯದಾಗಿ ನನ್ನ ಕುಟುಂಬ. ನನ್ನ ಬಾಲ್ಯದ ತರಬೇತುದಾರರು ದಿವಂಗತ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಆಟದ ಪಟ್ಟುಗಳನ್ನು ಕಲಿತಿದ್ದೇನೆ. ಇಷ್ಟು ದಿನ ಕ್ರಿಕೆಟ್ ಆಡಿದ ನನ್ನ ತಂಡಕ್ಕೂ ಧನ್ಯವಾದ ಅರ್ಪಿಸುತ್ತೇನೆ. ನನಗೆ ಮತ್ತೊಂದು ಕುಟುಂಬ ಸಿಕ್ಕಿತು, ನನಗೆ ಎಲ್ಲಾ ಅಭಿಮಾನಿಗಳಿಂದ ಹೆಸರು, ಖ್ಯಾತಿ ಮತ್ತು ಪ್ರೀತಿ ಸಿಕ್ಕಿತು. ಇಡೀ ಕಥೆ ಓದಬೇಕಾದರೆ ಪುಟ ತಿರುವಿ ಹಾಕಬೇಕು ಎಂಬ ಗಾದೆ ಮಾತಿದೆ. ಅದನ್ನೇ ನಾನು ಮಾಡಲಿದ್ದೇನೆ. ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ' ಎಂದು ಎಡಗೈ ಬ್ಯಾಟ್ಸಮನ್ ತಿಳಿಸಿದ್ದಾರೆ.
As I close this chapter of my cricketing journey, I carry with me countless memories and gratitude. Thank you for the love and support! Jai Hind! 🇮🇳 pic.twitter.com/QKxRH55Lgx
— Shikhar Dhawan (@SDhawan25) August 24, 2024
ನಾನು ದೇಶಕ್ಕಾಗಿ ಸಾಕಷ್ಟು ಆಡಿದ್ದೇನೆ. ನನಗೆ ಈ ಅವಕಾಶ ನೀಡಿದ ಬಿಸಿಸಿಐ ಮತ್ತು ಡಿಡಿಸಿಎಗೆ ಆಭಾರಿಯಾಗಿದ್ದೇನೆ. ಇಷ್ಟು ವರ್ಷ ನನಗೆ ಇಷ್ಟು ಪ್ರೀತಿ ನೀಡಿದ ಅಭಿಮಾನಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಧವನ್ ಕೊನೆಯದಾಗಿ ಡಿಸೆಂಬರ್ 2022 ರಲ್ಲಿ ಬಾಂಗ್ಲಾದೇಶ ವಿರುದ್ಧದ ODI ಸರಣಿಯಲ್ಲಿ ಭಾರತಕ್ಕಾಗಿ ಆಡಿದ್ದರು.
ಶಿಖರ್ ಧವನ್ ಸಾಧನೆ: ಶಿಖರ್ ಧವನ್ ಅಂಕಿಅಂಶಗಳ ಬಗ್ಗೆ ಮಾತನಾಡುವುದಾದ್ರೆ, ಅವರು 34 ಟೆಸ್ಟ್, 167 ODI ಮತ್ತು 68 T20 ಪಂದ್ಯಗಳನ್ನು ಒಳಗೊಂಡಂತೆ 269 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಧವನ್ ಒಟ್ಟು 10,867 ರನ್ ಗಳಿಸಿದ್ದಾರೆ. ಮಾರ್ಚ್ 16, 2013 ರಂದು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಕೇವಲ 85 ಎಸೆತಗಳಲ್ಲಿ ವೇಗದ ಶತಕವನ್ನು ಗಳಿಸಿ ದಾಖಲೆ ಬರೆದಿದ್ದರು. ಅವರು ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 23 ಶತಕಗಳನ್ನು ಗಳಿಸಿದ್ದಾರೆ. ಅದರಲ್ಲಿ 17 ODIಗಳಲ್ಲಿ ಮತ್ತು 6 ಟೆಸ್ಟ್‌ಗಳಲ್ಲಿ. ಅಷ್ಟೇ ಅಲ್ಲ, ಅವರ ಹೆಸರಿನಲ್ಲಿ 44 ಅರ್ಧ ಶತಕಗಳಿವೆ.
ಧವನ್ 2013 ಮತ್ತು 2017 ರಲ್ಲಿ ಸತತ ಎರಡು ಚಾಂಪಿಯನ್ಸ್ ಟ್ರೋಫಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಇದಕ್ಕಾಗಿ ಅವರು ಪ್ರತಿಷ್ಠಿತ 'ಗೋಲ್ಡನ್ ಬ್ಯಾಟ್' ಪ್ರಶಸ್ತಿಯನ್ನು ಸಹ ಪಡೆದರು. ಈ ಎಡಗೈ ಆಟಗಾರನಿಗೆ 'ಮಿಸ್ಟರ್ ಐಸಿಸಿ' ಎಂಬ ಬಿರುದು ಕೂಡ ನೀಡಲಾಗಿದೆ. ಇದಲ್ಲದೆ, ಧವನ್ 2015 ರ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ ಆಟಗಾರರಾಗಿದ್ದಾರೆ.
ಓದಿ: ಪುಟ್ಟ ಅಭಿಮಾನಿಯ ಭೇಟಿ ಮಾಡಿ ಆಟೋಗ್ರಾಫ್ ನೀಡಿದ ರೋಹಿತ್ ಶರ್ಮಾ - Rohit Sharma