ನವದೆಹಲಿ: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೇವಲ ಒಂದೇ ದಿನ ಬಾಕಿ ಇದೆ. ಇದರ ನಡುವೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ತಂಡದ ನಾಯಕರಾಗಿ ಮಹೇಂದ್ರ ಸಿಂಗ್ ಧೋನಿ ಬದಲಿಗೆ ರುತುರಾಜ್ ಗಾಯಕ್ವಾಡ್ ಆಯ್ಕೆಯಾಗಿದ್ದಾರೆ.
ತಮಿಳುನಾಡಿನ ಚೆನ್ನೈನ ಚೆಪಾಕ್‌ನ ಸ್ಟೇಡಿಯಂನಲ್ಲಿ ಮಾರ್ಚ್ 22ರಂದು ಐಪಿಎಲ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಮುಖಾಮುಖಿಯಾಗಲಿವೆ. 14 ಆವೃತ್ತಿಗಳಲ್ಲಿ ಚೆನ್ನೈ ತಂಡವನ್ನು ಎಂ.ಎಸ್.ಧೋನಿ ಮುನ್ನಡೆಸಿದ್ದರು. ಈ ಬಾರಿ ಕೂಡ ತಂಡವನ್ನು ಧೋನಿ ಅವರೇ ಮುನ್ನಡೆಸುತ್ತಾರೆ ಎಂದು ನಿರೀಕ್ಷಿಸುತ್ತಿದ್ದ ಸಿಎಸ್‌ಕೆ ಅಭಿಮಾನಿಗಳಿಗೆ ಈ ಬೆಳವಣಿಗೆ ಶಾಕ್ ನೀಡಿದೆ.
ಕಳೆದ ಋತುವಿನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ಮತ್ತು ಫ್ರಾಂಚೈಸಿಗೆ ಪ್ರಮುಖ ಪಾತ್ರ ವಹಿಸಿದ್ದ ರುತುರಾಜ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದೆ. ರುತುರಾಜ್ 42.14ರ ಸರಾಸರಿಯೊಂದಿಗೆ 590 ರನ್ ಗಳಿಸಿದ್ದರು. ಫ್ರಾಂಚೈಸಿಗೆ ಒಳ್ಳೆಯ ಆರಂಭಿಕ ಸ್ಟ್ಯಾಂಡ್‌ಗಳನ್ನು ಒದಗಿಸಿದ್ದರು. ನಾಳೆ ಆರ್‌ಸಿಬಿ ವಿರುದ್ಧದ ಪಂದ್ಯದ ಮೂಲಕ ಸಿಎಸ್‌ಕೆ ತನ್ನ ಅಭಿಯಾನ ಆರಂಭಿಸಲಿದೆ. ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ ತಂಡವು ಈ ಬಾರಿಯೂ ಪ್ರಶಸ್ತಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳುವ ಗುರಿ ಹೊಂದಿದೆ.
ಐಪಿಎಲ್ 2024ರ ಆರಂಭಕ್ಕೂ ಮುನ್ನ ಎಂ.ಎಸ್.ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್ ಅವರಿಗೆ ಹಸ್ತಾಂತರಿಸಿದ್ದಾರೆ. ರುತುರಾಜ್ 2019ರಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಅವಿಭಾಜ್ಯ ಅಂಗವಾಗಿದ್ದಾರೆ. ಈ ಅವಧಿಯಲ್ಲಿ ಐಪಿಎಲ್‌ನಲ್ಲಿ 52 ಪಂದ್ಯಗಳನ್ನು ಆಡಿದ್ದಾರೆ. ಮುಂಬರುವ ಋತುವಿಗಾಗಿ ತಂಡವು ಎದುರು ನೋಡುತ್ತಿದೆ ಎಂದು ಫ್ರಾಂಚೈಸ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿದೆ.
ಅಲ್ಲದೇ, ಟೂರ್ನಿಗೆ ಗಾಯಕ್ವಾಡ್ ಅವರನ್ನು ಸಿಎಸ್‌ಕೆ ನಾಯಕರನ್ನಾಗಿ ನೇಮಕ ಮಾಡಿರುವ ಕುರಿತು ಸಿಎಸ್‌ಕೆ ತಂಡವು ಸಾಮಾಜಿಕ ಜಾಲತಾಣದ ಖಾತೆಗಳಲ್ಲೂ ಪ್ರಕಟಿಸಿದೆ. ಪ್ರಿ - ಕ್ಯಾಪ್ಟನ್ಸ್ ಫೋಟೋಶೂಟ್‌ನಲ್ಲಿ ಗಾಯಕ್ವಾಡ್ ಭಾಗವಹಿಸಿ ಇತರ ತಂಡಗಳ ನಾಯಕರನ್ನು ಭೇಟಿಯಾದ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಪುಣೆ ಮೂಲದ ಗಾಯಕ್ವಾಡ್ ಅವರಿಗೆ ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಮತ್ತೊಂದೆಡೆ, ಎಂ.ಎಸ್.ಧೋನಿ ಸಿಎಸ್‌ಕೆ ನಾಯಕರಾಗಿ ಐಪಿಎಲ್ ಸೀಸನ್ ಪ್ರಾರಂಭಿಸದಿರುವುದು ಇದು ಎರಡನೇ ಬಾರಿಗೆ ಆಗಿದೆ. 2022ರ ಐಪಿಎಲ್‌ನಲ್ಲಿ ರವೀಂದ್ರ ಜಡೇಜಾ ತಂಡದ ನಾಯಕರಾಗಿದ್ದರು.
ಇದನ್ನೂ ಓದಿ: ಐಪಿಎಲ್: ನಾಯಕತ್ವ ಬಿಕ್ಕಟ್ಟಿನ ನಡುವೆ ಮೈದಾನದಲ್ಲಿ ತಬ್ಬಿಕೊಂಡ ಹಾರ್ದಿಕ್-ರೋಹಿತ್ - IPL 2024