ಬೆಂಗಳೂರು: ಇಂದು ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿವೆ. ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನ ನೀಡಲಾಗಿದೆ. ಐಪಿಎಲ್ 2024 ಆವೃತ್ತಿಯು 10ನೇ ಹೈವೋಲ್ಟೇಜ್ ಪಂದ್ಯ ಇದಾಗಿದ್ದು, ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದ ಆತಿಥ್ಯ ವಹಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿರುವ ಎರಡು ಪಂದ್ಯಗಳಲ್ಲಿ, ಪಂಜಾಬ್ ವಿರುದ್ಧದ ಕೊನೆಯ ಪಂದ್ಯ ಗೆದ್ದು 2 ಅಂಕ ಸಂಪಾದಿಸಿದೆ. ತಂಡವು ಸದ್ಯ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಒಂದು ಪಂದ್ಯದಿಂದ 2 ಅಂಕ ಗಳಿಸಿ 4ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್ಸಿಬಿ 14 ಪಂದ್ಯಗಳಲ್ಲಿ ಗೆದ್ದಿದ್ದರೆ, ಕೆಕೆಆರ್ 18 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.
ಕೊನೆಯ ಪಂದ್ಯ ಗೆದ್ದಿರುವ ಆರ್ಸಿಬಿ, ಸತತ ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ ಕೆಕೆಆರ್ ಆಡಿದ ಮೊದಲ ಪಂದ್ಯದಲ್ಲೇ ಜಯದ ನಗೆ ಬೀರಿದ್ದು ಅದೇ ಲಯ ಮುಂದುವರೆಸಲು ಸಜ್ಜಾಗಿದೆ. ಬ್ಯಾಟಿಂಗ್ಗೆ ನೆರವಾಗಿರುವ ಬೆಂಗಳೂರು ಪಿಚ್ನಲ್ಲಿ ಹೈಸ್ಕೋರಿಂಗ್ ಗೇಮ್ ಅನ್ನು ನಿರೀಕ್ಷಿಸಲಾಗಿದೆ.
ವಿರಾಟ್ ಕೊಹ್ಲಿ ಆರ್ಸಿಬಿ ತಂಡದಲ್ಲಿ ಆಡುತ್ತಿದ್ದರೆ, ಗೌತಮ್ ಗಂಭೀರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಕಾಣಿಸಿಕೊಂಡಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ತಂಡ: ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ.
ಆರ್ಸಿಬಿ ಪ್ಲೇಯಿಂಗ್ ಸಂಭಾವ್ಯ ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಕ್ಯಾಮರೂನ್ ಗ್ರೀನ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್ವೆಲ್, ಅನೂಜ್ ರಾವತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ರೀಸ್ ಟೋಪ್ಲಿ/ಲಾಕಿ ಫರ್ಗ್ಯುಸನ್, ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.
ಇದನ್ನೂ ಓದಿ: ಐಪಿಎಲ್ 2024: ವರ್ಷದ ಬಳಿಕ ಮೈದಾನಕ್ಕಿಳಿದು ಹೊಸ ದಾಖಲೆ ಬರೆದ ರಿಷಭ್ ಪಂತ್ - Rishabh Pant