ನವದೆಹಲಿ: ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಗೆಲುವಿನೊಂದಿಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ. ಈ ಪಂದ್ಯದಲ್ಲಿ ಹೇಳಿಕೊಳ್ಳುವ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರೂ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡದ ಭಾಗವಾಗಿರುವ ವಿಶ್ವದ ನಾಲ್ಕನೇ ಆಟಗಾರನಾಗಿ ರೋಹಿತ್ ಶರ್ಮಾ ದಾಖಲೆ ಬರೆದಿದ್ದಾರೆ. ಈ ವಿಚಾರದಲ್ಲಿ ರೋಹಿತ್, ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ರಿಕ್ಕಿ ಪಾಂಟಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ಅವರು 377 ಅಂತಾರಾಷ್ಟ್ರೀಯ ಪಂದ್ಯಗಳ ಗೆಲುವಿನ ಭಾಗವಾಗಿದ್ದರು. ಉಳಿದಂತೆ ಶ್ರೀಲಂಕಾದ ಮಾಜಿ ಬ್ಯಾಟರ್ ಮಹೇಲ ಜಯವರ್ಧನೆ 336 ಅಂತಾರಾಷ್ಟ್ರೀಯ ಪಂದ್ಯ, ಕೊಹ್ಲಿ 322 ಹಾಗೂ ರೋಹಿತ್ 308 ಅಂತಾರಾಷ್ಟ್ರೀಯ ಪಂದ್ಯಗಳ ಗೆಲುವಿನ ಭಾಗವಾಗಿದ್ದಾರೆ. ಇದಲ್ಲದೆ, ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದಲ್ಲಿ 307 ಅಂತಾರಾಷ್ಟ್ರೀಯ ಪಂದ್ಯಗಳ ಗೆಲುವಿನ ಭಾಗವಾಗಿದ್ದರು.
ಹೆಚ್ಚಿನ ಪಂದ್ಯಗಳ ಗೆಲುವಿನ ಭಾಗವಾಗಿರುವ ಆಟಗಾರರು
- ರಿಕಿ ಪಾಂಟಿಂಗ್ - 377 ಪಂದ್ಯ
- ಮಹೇಲ ಜಯವರ್ಧನೆ - 336
- ವಿರಾಟ್ ಕೊಹ್ಲಿ - 322
- ರೋಹಿತ್ ಶರ್ಮಾ - 308
- ಸಚಿನ್ ತೆಂಡೂಲ್ಕರ್ - 307
ಮೊದಲ ಟೆಸ್ಟ್: ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾನುವಾರ ಟೀಂ ಇಂಡಿಯಾ 280 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ಪರ ಅಶ್ವಿನ್, ಜಡೇಜಾ, ಶುಭಮನ್ ಗಿಲ್ ಮತ್ತು ರಿಷಬ್ ಪಂತ್ ಪ್ರಭಾವಿ ಆಟಗಾರರಾಗಿ ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಶತಕ ಸಿಡಿಸಿ ತಂಡಕ್ಕೆ ನೆರವಾದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದು ಮಿಂಚಿದರು.
ಯುವ ಬ್ಯಾಟರ್ಗಳಾದ ರಿಷಬ್ ಪಂತ್ ಮತ್ತು ಶುಭಮನ್ ಗಿಲ್ ಕೂಡ ಶತಕ ಸಿಡಿಸಿ ತಂಡದ ಸ್ಕೋರ್ ಅನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಅಶ್ವಿನ್ ಆಲ್ ರೌಂಡ್ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಈ ಟೆಸ್ಟ್ ಗೆಲುವಿನೊಂದಿಗೆ ಭಾರತ ತಂಡವು, ಬಾಂಗ್ಲಾ ವಿರುದ್ಧ 1-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯ ಸೆಪ್ಟೆಂಬರ್ 27 ರಿಂದ ಉತ್ತರ ಪ್ರದೇಶದ ಕಾನ್ಪುರ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಕುರಿತು ಐಸಿಸಿ ಬಿಗ್ ಅಪ್ಡೇಟ್: ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆ ಭಾರತ! - Champions Trophy 2025