ಮುಲ್ಲನ್‌ಪುರ- ಮೊಹಾಲಿ: ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಫ್ರಾಂಚೈಸಿಗಾಗಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಗುರುವಾರ ಮೊಹಾಲಿಯ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಎಂಐ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ತಮ್ಮ 250 ನೇ ಐಪಿಎಲ್ ಪಂದ್ಯವನ್ನು ಆಡಿದ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ನ 11 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬಲಗೈ ವೇಗಿ ಹರ್ಷಲ್ ಪಟೇಲ್ ಎಸೆದ ಬಾಲ್ ಅನ್ನು ಸಿಕ್ಸರ್ಗೆ ಅಟ್ಟುವ ಮೂಲಕ ತಂಡದ ಪರ ಈ ಸಾಧನೆ ಮಾಡಿದರು. ತಂಡದ ಪರ ಅವರು 224 ಸಿಕ್ಸರ್ಗಳನ್ನು ಬಾರಿಸುವ ಮೂಲಕ ರೆಕಾರ್ಡ್ ಬರೆದರು. ಮುಂಬೈ ಇಂಡಿಯನ್ಸ್ ಮಾಜಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ 223 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ, ನಾಯಕ ಹಾರ್ದಿಕ್ ಪಾಂಡ್ಯ (104), ಇಶಾನ್ ಕಿಶನ್ (103), ಮತ್ತು ಸೂರ್ಯಕುಮಾರ್ ಯಾದವ್ (97) ನಂತರದ ಸ್ಥಾನದಲ್ಲಿದ್ದಾರೆ.
ಈ ಪಂದ್ಯಕ್ಕೂ ಮುನ್ನ, ರೋಹಿತ್ 52.20 ಸರಾಸರಿಯೊಂದಿಗೆ 167.31 ಸ್ಟ್ರೈಕ್ ರೇಟ್ನಲ್ಲಿ ರನ್ಗಳನ್ನು ಹರಿಸಿ ಪ್ರೇಕ್ಷಕರನ್ನು ಮನರಂಜನೆಗೊಳಿಸಿದ್ದಾರೆ.
ರೋಹಿತ್ ಐಪಿಎಲ್‌ನಲ್ಲಿ 30.1 ಸರಾಸರಿ ಮತ್ತು 131.22 ಸ್ಟ್ರೈಕ್ ರೇಟ್‌ನೊಂದಿಗೆ 6,472 ರನ್ ಗಳಿಸಿದ್ದಾರೆ. T 20I ಗಳಲ್ಲಿ, ಅವರು 139.98 ಸ್ಟ್ರೈಕ್ ರೇಟ್‌ನೊಂದಿಗೆ 3,974 ರನ್ ಗಳಿಸಿದ್ದಾರೆ. ಬಲಗೈ ಬ್ಯಾಟರ್ ಈ ವರ್ಷ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ T20 ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಲಿದ್ದಾರೆ. ಮುಂಬೈ ಮೂಲದ ರೋಹಿತ್ ಅವರು ಮುಂಬೈ ಇಂಡಿಯನ್ಸ್‌ಗೆ ಐದು ಐಪಿಎಲ್ ಪ್ರಶಸ್ತಿಗಳನ್ನು ತಂದುಕೊಟ್ಟ ನಾಯಕ ಎಂಬ ಪ್ರಖ್ಯಾತಿಯನ್ನೂ ಹೊಂದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್‌ನ ಮಾಜಿ ಆಟಗಾರ ಸುರೇಶ್ ರೈನಾ (109), ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (108) ನಂತರ ರೋಹಿತ್ 100-ಕ್ಯಾಚ್ ಗಳನ್ನು ಪಡೆದ ಹೆಗ್ಗುರುತನ್ನು ಸಾಧಿಸಿದ ಮೂರನೇ ಭಾರತೀಯ ಮತ್ತು ನಾಲ್ಕನೇ ಒಟ್ಟಾರೆ ಆಟಗಾರ ಎಂಬ ಗರಿಮೆಗೂ ಭಾಜನರಾಗಿದ್ದಾರೆ. ಮಾಜಿ ಆಟಗಾರ ಮತ್ತು ಪ್ರಸ್ತುತ ಮುಂಬೈ ಇಂಡಿಯನ್ಸ್ ಕೋಚ್ ಕೀರಾನ್ ಪೊಲಾರ್ಡ್ (103) 100 ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಪಡೆದಿರುವ ಏಕೈಕ ಸಾಗರೋತ್ತರ ಕ್ರಿಕೆಟಿಗರಾಗಿದ್ದಾರೆ.
ಇದನ್ನು ಓದಿ: ಅಶುತೋಷ್ ಸ್ಫೋಟಕ ಅರ್ಧಶತಕ ವ್ಯರ್ಥ: ಮುಂಬೈ ಇಂಡಿಯನ್ಸ್‌ಗೆ 9 ರನ್ಗಳ ಜಯ - PBKS VS MI match