ಪ್ಯಾರಿಸ್ (ಫ್ರಾನ್ಸ್): ಭಾರತದ ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಅವರು ಭಾನುವಾರ ರಾತ್ರಿ ನಡೆದ ಪ್ಯಾರಿಸ್ ಒಲಿಂಪಿಕ್ಸ್ನ ಪುರುಷರ ಡಬಲ್ಸ್ ಟೆನ್ನಿಸ್ ತಮ್ಮ ಆರಂಭಿಕ ಪಂದ್ಯದಲ್ಲಿ ಫ್ರೆಂಚ್ ಜೋಡಿ ಗೇಲ್ ಮೊನ್‌ಫಿಲ್ಸ್ ಮತ್ತು ಎಡ್ವರ್ಡ್ ರೋಜರ್-ವಾಸೆಲಿನ್ ವಿರುದ್ಧ ಸೋಲನುಭವಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿ 5-7, 2-6 ಅಂತರದಿಂದ ಸೋಲನುಭವಿಸಿದ್ದು, ಇದರೊಂದಿಗೆ ಭಾರತದ ಪದಕ ಕನಸು ಕೂಡ ಭಗ್ನಗೊಂಡಿದೆ.
ಫ್ರೆಂಚ್ ಜೋಡಿಯು 1 ಗಂಟೆ 16 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಎರಡನೇ ಸುತ್ತಿನಲ್ಲಿ ಮೊನ್ಫಿಲ್ಸ್ ಮತ್ತು ವೆಸ್ಲಿನ್ ಜೋಡಿ ಜರ್ಮನಿಯ ಕೆವಿನ್ ಕ್ರಾವಿಟ್ಜ್ ಮತ್ತು ಟಿಮ್ ಪುಯೆಟ್ಜ್ ಜೋಡಿಯನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ಆರಂಭದಿಂದಲೇ 2-4 ಅಂತರದಿಂದ ಬಾಲಾಜಿ ಮತ್ತು ಬೋಪಣ್ಣ ಜೋಡಿ ಹಿನ್ನಡೆ ಅನುಭವಿಸಿತ್ತು. ಬಳಿಕ ಕಮ್ ಬ್ಯಾಕ್ ಮಾಡಲು ಭಾರತದ ಜೋಡಿ ಸತತ ಪ್ರಯತ್ನ ನಡೆಸಿ ಸ್ಕೋರ್ ಲೈನ್ 5-5ಕ್ಕೆ ಇಳಿಸಿತು. ಪಂದ್ಯದ ಮೊದಲ ಸೆಟ್ ಟೈ ಬ್ರೇಕರ್‌ನಲ್ಲಿ ಅಂತ್ಯಗೊಳ್ಳಲಿದೆ ಎಂದೇ ಅಂದಾಜಿಸಲಾಗಿತ್ತು. ಆದ್ರೆ ಎರಡನೇ ಬ್ರೇಕ್ ಪಡೆದ ಫ್ರೆಂಚ್ ಜೋಡಿ 42 ನಿಮಿಷಗಳಲ್ಲಿ 5-7 ಅಂತರದಿಂದ ಮೊದಲ ಸೆಟ್ನಲ್ಲಿ ಗೆಲುವು ಸಾಧಿಸಿತು.
ಇದರ ನಂತರವೂ ಎರಡನೇ ಸೆಟ್ನಲ್ಲಿ ಭಾರತದ ಜೋಡಿ ಪುಟಿದೇಳಲು ಸಾಕಷ್ಟು ಪ್ರಯತ್ನ ಪಟ್ಟಿತಾದರೂ ಸಾಧ್ಯವಾಗಲಿಲ್ಲ. ಫ್ರೆಂಚ್ ಜೋಡಿ ಎರಡನೇ ಸೆಟ್ನಲ್ಲೂ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿ ಬೋಪಣ್ಣ ಮತ್ತು ಬಾಲಾಜಿ ಮೇಲೆ ಪ್ರಾಬಲ್ಯ ಸಾಧಿಸುತ್ತ ಸಾಗಿತು. ಕೇವಲ 28 ನಿಮಿಷಗಳಲ್ಲಿ, ಫ್ರೆಂಚ್ ಜೋಡಿ ಪಂದ್ಯವನ್ನು ತಮ್ಮದಾಗಿಸಿಕೊಂಡಿತು. ಫ್ರೆಂಚ್ ತಂಡವನ್ನು ಪ್ರತಿನಿಧಿಸುತ್ತಿರುವ ಮೊನ್ಫಿಲ್ಸ್ ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲಿ ಫ್ರಾನ್ಸ್ ಪರ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಹೊಂದಿದ್ದಾರೆ. ಈ ಹಿನ್ನೆಲೆ ಈ ಜೋಡಿ ಮೇಲೆ ದೇಶವು ಪದಕ ನಿರೀಕ್ಷೆಯನ್ನು ಹೊಂದಿದೆ.
ಇದಕ್ಕೂ ಮುನ್ನ ಕೊರೆಂಟಿನ್ ಮೌಟೆಟ್ ವಿರುದ್ಧ ಸುಮಿತ್ ನಗಾಲ್ ತೀವ್ರ ಪೈಪೋಟಿ ನೀಡಿದರೂ ಮೂರು ಸೆಟ್ಗಳ ರೋಚಕ ಪಂದ್ಯದಲ್ಲಿ ಸೋಲು ಕಂಡಿದ್ದರು. ರೋಲ್ಯಾಂಡ್ ಗ್ಯಾರೋಸ್‌ನ ಕೋರ್ಟ್ ಸೆವೆನ್‌ನಲ್ಲಿ ಎರಡು ಗಂಟೆ 28 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮೌಟೆಟ್ 2-6, 6-4, 5-7 ಸೆಟ್ಗಳಿಂದ ಗೆಲುವು ಸಾಧಿಸಿದ್ದರು.