ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಈ ಗೆಲುವಿನಲ್ಲಿ ಯುವ ಬ್ಯಾಟರ್ ರಿಷಬ್ ಪಂತ್ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 39 ರನ್ ಗಳಿಸಿ ಉತ್ತಮ ಎನಿಸಿದ್ದ ಪಂತ್ ಎರಡನೇ ಇನಿಂಗ್ಸ್‌ನಲ್ಲಿ ಶತಕ (109) ಸಿಡಿಸಿ ಮಿಂಚಿದರು. ರಸ್ತೆ ಅಪಘಾತದಿಂದ ಚೇತರಿಸಿಕೊಂಡ ನಂತರ ಇದು ಅವರ ಮೊದಲ ಟೆಸ್ಟ್ ಶತಕವಾಗಿದೆ.
ಏತನ್ಮಧ್ಯೆ, ಪಂತ್ ಅವರ ಆರನೇ ಟೆಸ್ಟ್ ಶತಕವಾಗಿದ್ದು ಎಂಎಸ್ ಧೋನಿ ದಾಖಲೆಯನ್ನು ಸರಿಗಟ್ಟಿದರು. ಧೋನಿ 90 ಟೆಸ್ಟ್‌ಗಳಲ್ಲಿ ಆರು ಶತಕಗಳನ್ನು ಗಳಿಸಿದ್ದರೆ, ಪಂತ್ ಈ ಸಾಧನೆಯನ್ನು ಕೇವಲ 34 ಟೆಸ್ಟ್‌ಗಳಲ್ಲಿ ಸಾಧಿಸಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳು ಅವರನ್ನು ಧೋನಿಗೆ ಹೋಲಿಕೆ ಮಾಡಿ ಅಭಿನಂದನೆ ಸಲ್ಲಿಸಿಲಾರಂಭಿಸಿದ್ದರು. ಇದೀಗ ಈ ಬಗ್ಗೆ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮನ್ನು ಎಂಎಸ್ ಧೋನಿ ಜೊತೆ ಹೋಲಿಕೆ ಮಾಡಬಾರದು ಎಂದು ಹೇಳಿರುವ ಪಂತ್, ಪ್ರತಿಯೊಂದು ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವುದೇ ನನ್ನ ಮೊದಲ ಆದ್ಯತೆ ಆಗಿದೆ ಎಂದಿದ್ದಾರೆ.
ಚೆಪಾಕ್ ಸ್ಟೇಡಿಯಂ ಚೆನ್ನೈ ಸೂಪರ್ ಕಿಂಗ್ಸ್‌ನ ತವರು ಮೈದಾನವಾಗಿದೆ. ಮಾಹಿ ಭಾಯ್ ಇಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಒಂದು ಮಾತು ಹೇಳಿದ್ದೆ. ನಾನು ಎಷ್ಟೇ ಚೆನ್ನಾಗಿ ಪ್ರದರ್ಶನ ನೀಡಿದರು ನನ್ನನ್ನು ಧೋನಿ ಜೊತೆ ಹೋಲಿಸಬೇಡಿ. ನನ್ನ ಗುರಿ ನನ್ನ ಆಟದ ಮೇಲೆ ಕೇಂದ್ರೀಕರಿಸುವುದು ಮತ್ತು ಅತ್ಯುತ್ತಮ ಪ್ರದರ್ಶನ ನೀಡುವುದಾಗಿದೆ ಎಂದು ತಿಳಿಸಿದರು. ಮುಂದುವರೆದು ಮಾತನಾಡುತ್ತ ಇಲ್ಲಿನ ಹವಾಮಾನವು ಅದ್ಭುತವಾಗಿತ್ತು. ನಾನು ಅದನ್ನು ತುಂಬಾ ಆನಂದಿಸಿದೆ. ಅಲ್ಲದೇ 3ನೇ ದಿನದಾಟದಲ್ಲಿ ಬಾಂಗ್ಲಾ ಸ್ಪಿನ್ನರ್‌ಗಳೊಂದಿಗೆ ಆಟವನ್ನು ಆರಂಭಿಸಿದ್ದೆ. ಆದರೆ, ಕಷ್ಟಪಟ್ಟು ವೇಗವಾಗಿ ಆಡಲು ನಿರ್ಧರಿಸಿದೆ. ಈ ಪಿಚ್ ಬ್ಯಾಟಿಂಗ್‌ಗೆ ಸೂಕ್ತವಾಗಿತ್ತು. ಅದರ ಲಾಭ ಪಡೆದು ಶತಕ ಬಾರಿಸಿದೆ. ಊಟಕ್ಕೆ ಹೋದಾಗ ಡಿಕ್ಲೇರ್ ಬಗ್ಗೆ ಚರ್ಚೆ ನಡೆಯುತ್ತಿತ್ತು. ಭೋಜನ ವಿರಾಮದ ನಂತರ ಒಂದು ಗಂಟೆ ಸಮಯ ನೀಡುವುದಾಗಿ ರೋಹಿತ್ ಹೇಳಿದ್ದರು. ಹಾಗಾಗಿ ಬ್ಯಾಟಿಂಗ್ ವೇಗ ಹೆಚ್ಚಿಸಿದ್ದೆ' ಎಂದು ಪಂತ್ ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು.