ಅಹಮದಾಬಾದ್ (ಗುಜರಾತ್): ಅದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ. ಭಾನುವಾರ ಸಂಜೆ 6.41 ನಿಮಿಷ. ತವರು ತಂಡವಾದ ಗುಜರಾತ್ ಟೈಟಾನ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿಗಾಗಿ ಹೋರಾಡುತ್ತಿತ್ತು. ಕ್ರೀಸ್ನಲ್ಲಿ ಇದ್ದಿದ್ದು, ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ, ಸಿಡಿಲಮರಿ ವಿಲ್ ಜಾಕ್ಸ್.
ಬಳಿಕ 6 ನಿಮಿಷ ಕಳೆಯಿತು. ಅಂದರೆ ಸಂಜೆ 6.47. ಅಷ್ಟೊತ್ತಿಗಾಗಲೇ ಇಡೀ ಪಂದ್ಯವೇ ಮುಗಿದಿತ್ತು. ವಿಲ್ ಜಾಕ್ಸ್ ಐಪಿಎಲ್ನಲ್ಲಿ ಚೊಚ್ಚಲ ಶತಕ ಬಾರಿಸಿ ಸಂಭ್ರಮಿಸಿದ್ದರು. ಅಬ್ಬರಿಸುತ್ತಿದ್ದ ವಿರಾಟ್ ಕೊಹ್ಲಿ ಇನ್ನೊಂದು ತುದಿಯಲ್ಲಿ ಸುಮ್ಮನೆ ನಿಂತು ಚಪ್ಪಾಳೆ ತಟ್ಟುತ್ತಿದ್ದರು.
ಫೀಲ್ಡಿಂಗ್ ವೇಳೆ ಪರದಾಡಿ, ಬ್ಯಾಟಿಂಗ್ ಮಾಡುತ್ತಿದ್ದಾಗ ರನ್ ಗಳಿಸಲು ತಿಣುಕಾಡುತ್ತಿದ್ದ ವಿಲ್ ಜಾಕ್ಸ್. ಆರೇ ನಿಮಿಷದಲ್ಲಿ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಮೈಯಲ್ಲಿ ಸೂಪರ್ ಪವರ್ ಹೊಕ್ಕಂತೆ ಆಟವಾಡಿದ ದಾಂಡಿಗ ಎರಡೇ ಓವರ್ನಲ್ಲಿ 56 ರನ್ ಚಚ್ಚಿ ಪಂದ್ಯವನ್ನು ನಿಮಿಷಗಳ ಅಂತರದಲ್ಲಿ ಗೆಲ್ಲಿಸಿದರು. ಇದು ಆರ್ಸಿಬಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರೆ, ಗುಜರಾತ್ಗೆ ಅಚ್ಚರಿಯೋ ಅಚ್ಚರಿ.
ವಿಲ್'ಪವರ್' ಬ್ಯಾಟಿಂಗ್: ಫೀಲ್ಡಿಂಗ್ ವೇಳೆ ಕ್ಯಾಚ್ ಬಿಟ್ಟು ತಂಡದ ಬೇಸರಕ್ಕೆ ಕಾರಣವಾಗಿದ್ದ ವಿಲ್ ಜಾಕ್ಸ್, ನಾಯಕ ಡು ಪ್ಲೆಸಿಸ್ ಔಟಾದ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರು. ಮೊದಲು 17 ಎಸೆತಗಳಲ್ಲಿ 17 ರನ್ ಗಳಿಸಿದರು. ಒಂಟಿ ಬೌಂಡರಿ ಮಾತ್ರ ಖಾತೆಯಲ್ಲಿತ್ತು. ಇದರ ಬಳಿಕವೇ ನೋಡಿ ಎಲ್ಲವೂ ಬದಲಾಗಿದ್ದು. 70 ರನ್ ಗಳಿಸಿ ಶತಕದಂಚಿನಲ್ಲಿದ್ದ ವಿರಾಟ್ ಕೊಹ್ಲಿಗೆ ಸ್ಟ್ರೈಕ್ ಬಿಟ್ಟುಕೊಡದೇ ಚೆಂಡಾಡಿದ ಜಾಕ್ಸ್ 15 ಮತ್ತು 16ನೇ ಓವರ್ನಲ್ಲಿ ಪ್ರತಿ ಓವರ್ಗೆ 28 ರಂತೆ ಬರೋಬ್ಬರಿ 58 ರನ್ ಚಚ್ಚಿದರು.
ಮೋಹಿತ್ ಶರ್ಮಾರ 15ನೇ ಓವರ್ನಲ್ಲಿ 4,6,ನೋಬಾಲ್+6,2,6,4 ರನ್ ಗಳಿಸಿದರು. ಬಳಿಕ ಬಂದ ರಶೀದ್ ಖಾನ್ ಓವರ್ನಲ್ಲಿ 6 6 4 6 6 ರನ್ ಗಳಿಸಿ ಪಂದ್ಯವನ್ನೇ ಮುಗಿಸಿದರು. ಅಲ್ಲಿಗೆ 41 ಎಸೆತಗಳಲ್ಲಿ ಬರೊಬ್ಬರಿ 100 ರನ್ ಗಳಿಸಿ ಶತಕದ ಅಲೆಯಲ್ಲಿ ತೇಲಿದರು. 10 ಸಿಕ್ಸರ್, 5 ಬೌಂಡರಿಗಳು ಖಾತೆ ಸೇರಿದವು.
ಸ್ತಂಭಿತನಾಗಿದ್ದ ವಿರಾಟ್ ಕೊಹ್ಲಿ: ನೋಡು ನೋಡುತ್ತಿದ್ದಂತೆ ಇಡೀ ಪಂದ್ಯವೇ ಮುಗಿಸಿದ ವಿಲ್ ಜಾಕ್ಸ್ ಬ್ಯಾಟಿಂಗ್ಗೆ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಗರ ಬಡಿದವರಂತೆ ನಿಂತಿದ್ದರು. ಜಾಕ್ಸ್ 6 ನಿಮಿಷ, 10 ಎಸೆತದಲ್ಲಿ 50 ರನ್ ಬಾರಿಸಿದರೆ, ಕೊಹ್ಲಿ 1 ರನ್ ಮಾತ್ರ ಗಳಿಸಿದ್ದರು. ಪಂದ್ಯವನ್ನು ಕ್ಷಣಮಾತ್ರದಲ್ಲಿ ಗೆಲ್ಲಿಸಿದ ಯುವ ಆಟಗಾರರನ್ನು ಕೊಹ್ಲಿ ತಬ್ಬಿಕೊಂಡು ಶಹಬ್ಬಾಸ್ ಹೇಳಿದರು.
ಇದನ್ನೂ ಓದಿ: IPL: ವಿಲ್ ಜಾಕ್ಸ್ ಸಿಡಿಲಬ್ಬರದ ಬ್ಯಾಟಿಂಗ್: ಆರ್ಸಿಬಿಗೆ ಶರಣಾದ ಟೈಟಾನ್ಸ್ - RCB BEATS GT