ಬೆಂಗಳೂರು: ದೃಷ್ಟಿಯ ಉಡುಗೊರೆ, ನಿಸ್ವಾರ್ಥತೆ ಮತ್ತು ದಾನ ಸಂಸ್ಕೃತಿಯನ್ನು ಬೆಳೆಸಲು ಪ್ರತಿಯೊಬ್ಬರು ತಮ್ಮ ಕಣ್ಣುಗಳನ್ನು ದಾನ ಮಾಡಿ ಮಾದರಿಯಾಗಬೇಕು ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದರು.
ನೇತ್ರದಾನದ ಪ್ರತಿಜ್ಞೆ ಮತ್ತು ದಾನ ಪ್ರೇರಣೆಗಾಗಿ ಶಂಕರ ಕಣ್ಣಿನ ಆಸ್ಪತ್ರೆ, ಸಿಐಐ ಯಂಗ್ ಇಂಡಿಯನ್ಸ್ ಸಹಯೋಗದೊಂದಿಗೆ ಶುಕ್ರವಾರ ನಗರದ ಹಲಸೂರಿನ ಯುನೈಟೆಡ್ ಫುಟ್‌ಬಾಲ್ ಕ್ಲಬ್‌ನಲ್ಲಿ ಆಯೋಜಿಸಿದ್ದ ದೃಷ್ಟಿಹೀನ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ನೇತ್ರದಾನ ಕುರಿತ 15 ದಿನಗಳ ಸರಣಿ ಕಾರ್ಯಕ್ರಮದ ಕ್ರೀಡಾಕೂಟಕ್ಕೆ ಆಹ್ವಾನಿಸಿರುವುದಕ್ಕೆ ಆಭಾರಿಯಾಗಿದ್ದೇನೆ. ನೇತ್ರದಾನ ಜೀವನವನ್ನು ಪರಿವರ್ತಿಸುವ ಮತ್ತು ದೃಷ್ಟಿಹೀನರಿಗೆ ಬೆಳಕನ್ನು ತರುವ ಉದಾತ್ತ ಕಾರ್ಯವಾಗಿದ್ದು, ಇದು ದೃಷ್ಟಿಹೀನರಿಗೆ ಸ್ವತಂತ್ರ ಜೀವನವನ್ನು ನಡೆಸಲು ಅನುವು ಮಾಡಿಕೊಡಲಿದೆ ಎಂದರು.
ಮಾಜಿ ಒಲಂಪಿಯನ್ ಮತ್ತು ಭಾರತೀಯ ಹಾಕಿ ತಂಡದ ನಾಯಕ ಅನಿಲ್ ಆಲ್ಡ್ರಿನ್ ಮಾತನಾಡಿ, ಕ್ರೀಡೆಯ ರೋಮಾಂಚನ ಅನುಭವ ಮತ್ತು ಸಾಧನೆಯಲ್ಲಿ ದೂರದೃಷ್ಟಿಗೆ ಇರುವ ಶಕ್ತಿಯನ್ನು ಅರಿತವನಾಗಿ, ನೇತ್ರದಾನಕ್ಕೆ ಪ್ರೇರೇಪಿಸುವ ಕ್ರೀಡಾಕೂಟದ ಭಾಗಿಯಾಗಿರುವುದು ಗೌರವದ ವಿಷಯವಾಗಿದೆ. ಇಂದು ನಮ್ಮ ದೃಷ್ಟಿಹೀನ ಕ್ರೀಡಾಪಟುಗಳು ಪ್ರದರ್ಶಿಸುತ್ತಿರುವ ಸ್ಥೈರ್ಯ ಮತ್ತು ದೃಢ ನಿಶ್ಚಯ ಸ್ಫೂರ್ತಿದಾಯಕವಾಗಿದೆ. ಅದು ನಿಜವಾದ ದೃಷ್ಟಿಯನ್ನು ಕೂಡ ಮೀರಿದೆ ಎಂಬುದನ್ನು ನಮಗೆ ಮತ್ತೊಮ್ಮೆ ನೆನಪಿಸಿದೆ ಎಂದು ಹೇಳಿದರು.
ಯಂಗ್ ಇಂಡಿಯನ್ಸ್ ಬೆಂಗಳೂರು ವಿಭಾಗದ ಮುಖ್ಯಸ್ಥ ಮೊಹಮ್ಮದ್ ಜಹ್ರಿನ್ ಮಾತನಾಡಿ, ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಲು, ತಮ್ಮ ಕಣ್ಣುಗಳನ್ನು ದಾನ ಮಾಡಲು ಪ್ರೇರೇಪಿಸಲು ನಮ್ಮ ಸಂಸ್ಥೆ ಬದ್ಧವಾಗಿದೆ. ಲಕ್ಷಾಂತರ ದೃಷ್ಟಿಹೀನರಿಗೆ ದೃಷ್ಟಿಯನ್ನು ಪುನಃಸ್ಥಾಪಿಸಲು ಈ ಮೂಲಕ ನಾವು ಸಹಾಯ ಮಾಡಬಹುದಾಗಿದೆ. ಇದೇ ಮಾದರಿ ಕಾರ್ಯವನ್ನು ಉತ್ತೇಜಿಸಲು ಶಂಕರ ಕಣ್ಣಿನ ಆಸ್ಪತ್ರೆಯೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ನಮ್ಮ ಸಂಸ್ಥೆ ಕಣ್ಣಿನ ದಾನ ಕುರಿತ 15 ದಿನಗಳ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯ ಕಾರ್ನಿಯಾ, ಆಕ್ಯುಲರ್ ಸರ್ಫೇಸ್ ಮತ್ತು ರಿಫ್ರ್ಯಾಕ್ಟಿವ್ ಸರ್ಜರಿ ವಿಭಾಗದ ಸಲಹಾ ತಜ್ಞ ಡಾ. ಪಲ್ಲವಿ ಜೋಶಿ ಮಾತನಾಡಿ, ಕಳೆದ ವರ್ಷ ನಮ್ಮ ಆಸ್ಪತ್ರೆಯಲ್ಲಿ ಸಂಗ್ರಹಿಸಿದ ಒಟ್ಟು ನೇತ್ರದಾನ ಪ್ರತಿಜ್ಞೆಗಳ ಸಂಖ್ಯೆ ಸುಮಾರು 700 ಆಗಿದೆ. ನಾವು ಈ ಸಂಖ್ಯೆಯನ್ನು ಶೇಕಡಾ 10 ರಿಂದ 15 ರಷ್ಟು ಹೆಚ್ಚಿಸಲು ಬಯಸುತ್ತೇವೆ. ಕಾರ್ನಿಯಲ್ ಕಸಿಯಲ್ಲಿ, ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ನಮ್ಮ ಬದ್ಧತೆಯ ಭಾಗವಾಗಿದೆ. ನಮ್ಮ ಆಸ್ಪತ್ರೆಯಲ್ಲಿ ವಾರ್ಷಿಕವಾಗಿ 160 ರಿಂದ 180 ನೇತ್ರದಾನ ನಡೆಯುತ್ತಿದೆ.
ಇದು ಇಂತಹ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಮತ್ತು ಭಾಗವಹಿಸುವಿಕೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಕಾರ್ನಿಯಾಗಳ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿ ಸುಮಾರು 100 ವ್ಯಕ್ತಿಗಳು ವೆಟಿಂಗ್ ಲಿಸ್ಟ್ನಲ್ಲಿ ಉಳಿದಿದ್ದಾರೆ. ಇದರಲ್ಲಿ 6 ವರ್ಷ ವಯಸ್ಸಿನ ಮಕ್ಕಳಿಂದ ಹಿಡಿದು 80 ವರ್ಷ ವಯಸ್ಸಿನ ಹಿರಿಯರು ಸೇರಿದ್ದಾರೆ. ಅಗತ್ಯ ಮತ್ತು ಲಭ್ಯತೆಯ ನಡುವಿನ ಅಸಮಾನತೆಯು ಆತಂಕಕಾರಿಯಾಗಿದ್ದು, ಕಣ್ಣಿನ ದಾನದ ಬಗ್ಗೆ ವ್ಯಾಪಕ ಜಾಗೃತಿಯಿಂದ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ. ಒಟ್ಟು ಈವರೆಗೆ ನಮ್ಮ ಆಸ್ಪತ್ರೆಯಲ್ಲಿ ಸುಮಾರು 5000 ಕಾರ್ನಿಯಲ್ ಕಸಿಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕ್ರೀಡಾಪಟುಗಳಿಗೆ ಸಕಾಲದಲ್ಲಿ ನೆರವು ಅಗತ್ಯ: ಒಲಿಂಪಿಕ್ ಪದಕ ವಿಜೇತ ಸ್ವಪ್ನಿಲ್ ಕುಸಾಲೆ - Swapnil Kusale