ಲಾಹೋರ್ (ಪಾಕಿಸ್ತಾನ): ಪಾಕಿಸ್ತಾನ ಕ್ರಿಕೆಟ್ನಲ್ಲಿ ಮತ್ತೆ ನಾಯಕತ್ವದ ಬಿಕ್ಕಟ್ಟು ಉದ್ಭವಿಸಿದೆ. ಟಿ20, ಏಕದಿನ, ಟೆಸ್ಟ್ನಲ್ಲಿ ತಂಡ ಹೀನಾಯ ಪ್ರದರ್ಶನ ನೀಡುತ್ತಿದ್ದು, ಮಾಜಿ ನಾಯಕ ಬಾಬರ್ ಅಜಂಗೆ ಮತ್ತೆ ನಾಯಕತ್ವದ ಪಟ್ಟ ಕಟ್ಟುವ ಸಾಧ್ಯತೆ ಇದೆ. ಈ ವರ್ಷ ಜೂನ್ನಲ್ಲಿ ನಡೆಯುವ ಟಿ-20 ವಿಶ್ವಕಪ್ಗೂ ಮುನ್ನ ಈ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ತಂಡ ಕಳಪೆ ಪ್ರದರ್ಶನ ನೀಡಿದ ಬಳಿಕ ಬಾಬರ್ ಅಜಂ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು. ಮೂರು ಮಾದರಿ ನಾಯಕತ್ವಕ್ಕೆ ಬಾಬರ್ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ವೇಗದ ಬೌಲರ್ ಶಾಹೀನ್ ಆಫ್ರಿದಿ ಅವರನ್ನು ಟಿ-20 ಮತ್ತು ಏಕದಿನ ಮತ್ತು ಟೆಸ್ಟ್ ತಂಡಕ್ಕೆ ಶಾನ್ ಮಸೂದ್ ಅವರನ್ನು ನಾಯಕರನ್ನಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಘೋಷಿಸಿತ್ತು.
ಇತ್ತೀಚೆಗೆ ಇಬ್ಬರೂ ಆಟಗಾರರ ನಾಯಕತ್ವದಲ್ಲಿ ತಂಡ ಕಳಪೆ ಪ್ರದರ್ಶನ ನೀಡಿ ಸರಣಿಗಳನ್ನು ಕಳೆದುಕೊಂಡಿತ್ತು. ಇದರಿಂದ ಪಿಸಿಬಿ ನಾಯಕರ ಮೇಲೆ ಬೇಸರ ವ್ಯಕ್ತಪಡಿಸಿದೆ. ಜೂನ್ನಲ್ಲಿ ಮಹತ್ವದ ಟಿ -20 ವಿಶ್ವಕಪ್ ನಡೆಯಲಿದ್ದು, ಅದಕ್ಕೂ ಮೊದಲು ತಂಡವನ್ನು ಬಲಿಷ್ಠಗೊಳಿಸಲು ನಾಯಕತ್ವದ ಬದಲಾವಣೆಗೆ ಕೈಹಾಕಿದೆ ಎಂದು ವರದಿಯಾಗಿದೆ.
ಮತ್ತೆ ಬಾಬರ್ ಹೆಗಲಿಗೆ ಕ್ಯಾಪ್ಟನ್ಸಿ: ಪಾಕ್ ತಂಡದ ಪರವಾಗಿ ಬ್ಯಾಟಿಂಗ್ ಜೊತೆಗೆ ನಾಯಕತ್ವದಲ್ಲಿ ಮಿಂಚಿದ್ದ ಬಾಬರ್ ಅಜಂ ವಿಶ್ವಕಪ್ ಸೋಲಿನ ಬಳಿಕ ಭಾರೀ ಟೀಕೆಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಅವರು ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಇದೀಗ ಪಿಸಿಬಿ ಮತ್ತೆ ಅವರಿಗೆ ತಂಡದ ಹೊಣೆ ನೀಡಲು ಮುಂದಾಗಿದೆ. ಆದರೆ, ಇದಕ್ಕೆ ಬಾಬರ್ ಕೆಲ ಷರತ್ತುಗಳನ್ನು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೂರೂ ಮಾದರಿಯ ಕ್ರಿಕೆಟ್ಗೆ ತಮ್ಮನ್ನು ನಾಯಕನನ್ನಾಗಿ ಮಾಡಬೇಕು. ತಂಡದ ಆಯ್ಕೆ, ಕೋಚ್ಗಳ ನೇಮಕ ಸೇರಿದಂತೆ ಹಲವು ವಿಷಯಗಳಲ್ಲಿ ಆದ್ಯತೆ ನೀಡಬೇಕು ಎಂಬ ಷರತ್ತು ವಿಧಿಸಿದ್ದಾರೆ. ಆದರೆ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ಎಲ್ಲ ಕರಾರುಗಳನ್ನು ಒಪ್ಪಲು ಮನಸ್ಸು ಮಾಡಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ವಿಶ್ವಕಪ್ಗೆ ತಯಾರಿ ನಡೆಸಬೇಕಿದ್ದ ತಂಡ ನಾಯಕತ್ವದ ಗೋಜಲಿನಲ್ಲಿ ಒದ್ದಾಡುತ್ತಿದೆ.
ಶಾಹೀನ್ ಬೇಸರ: ಇನ್ನೊಂದೆಡೆ ತಮ್ಮನ್ನು ನಾಯಕತ್ವದಿಂದ ಕೆಳಗಿಳಿಸುವ ಬಗ್ಗೆ ಶಾಹೀನ್ ಅಫ್ರಿದಿ ಬೇಸರಗೊಂಡಿದ್ದಾರೆ. ಯಾವುದೇ ಪೂರ್ವ ಮಾಹಿತಿ ನೀಡದೇ ಕೈಬಿಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾಗಿ ತಿಳಿದು ಬಂದಿದೆ. ಜೊತೆಗೆ ಏಪ್ರಿಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ತವರಿನಲ್ಲಿ ನಡೆಯುವ ಟಿ-20 ಸರಣಿಯಲ್ಲಿ ಕೊನೆಯ ಅವಕಾಶ ನೀಡುವ ಬಗ್ಗೆಯೂ ಪಿಸಿಬಿ ಯೋಚಿಸಿದೆ ಎಂದು ಮೂಲಗಳು ತಿಳಿಸಿವೆ.
ವಿದೇಶಿ ಕೋಚ್ಗಳಿಂದ ನಿರಾಸಕ್ತಿ: ಪಾಕಿಸ್ತಾನ ತಂಡಕ್ಕೆ ಮುಖ್ಯ ಕೋಚ್ ಆಗಲು ವಿದೇಶಿಗರು ನಿರಾಸಕ್ತಿ ತೋರುತ್ತಿರುವುದು ಪಿಸಿಬಿಗೆ ಮತ್ತೊಂದು ಹೊಡೆತ ಬಿದ್ದಿದೆ. ಆ್ಯಡಂ ವೋಗ್ಸ್, ಲ್ಯೂಕ್ ರೋಂಚಿ, ಶೇನ್ ವ್ಯಾಟ್ಸನ್ ಮತ್ತು ಮೈಕ್ ಹೆಸ್ಸನ್ ಸೇರಿದಂತೆ ಹಲವಾರು ವಿದೇಶಿ ಮಾಜಿ ಆಟಗಾರರು ತಂಡದ ಕೋಚ್ ಆಗಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಗ್ಯಾರಿ ಕರ್ಸ್ಟನ್ ಮತ್ತು ಜೇಸನ್ ಗಿಲ್ಲಿಸ್ಪಿ ಅವರೊಂದಿಗಿನ ಪಿಸಿಪಿ ನಡೆಸಿರುವ ಮಾತುಕತೆ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ. ಇಬ್ಬರೂ ಪ್ರತ್ಯೇಕವಾಗಿ ವೈಟ್ಬಾಲ್ ಮತ್ತು ರೆಡ್ ಬಾಲ್ ತರಬೇತುದಾರರಾಗಲು ಮುಂದಾಗಿದ್ದಾರೆ. ಆದರೆ, ತಮ್ಮದೇ ಬೆಂಬಲ ಸಿಬ್ಬಂದಿಯನ್ನು ಕರೆತರಲು ಅವರು ನಿರ್ಣಯಿಸಿದ್ದು, ಸ್ಥಳೀಯ ಮಾಜಿ ಆಟಗಾರರಿಗೆ ಅವಕಾಶ ನೀಡುವ ಇರಾದೆಯನ್ನು ಪಿಸಿಬಿ ಹೊಂದಿದೆ. ಇದು ಕೂಡ ಬಿಕ್ಕಟ್ಟು ಸೃಷ್ಟಿಸಿದೆ.
ಇದನ್ನೂ ಓದಿ: ಎಫ್‌ಐಎಚ್ ಅಥ್ಲೀಟ್‌ಗಳ ಸಮಿತಿಯ ಸಹ - ಅಧ್ಯಕ್ಷರಾಗಿ ಪಿಆರ್ ಶ್ರೀಜೇಶ್ ನೇಮಕ - PR Sreejesh