ಹೈದರಾಬಾದ್: ಜುಲೈ 26 ರಿಂದ ಆರಂಭವಾಗಲಿರುವ ವರ್ಣರಂಜಿತ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಇನ್ನೂ ನಾಲ್ಕೇ ದಿನಗಳು ಬಾಕಿ ಇವೆ. ಭಾರತದಿಂದ 117 ಸ್ಪರ್ಧಿಗಳು ವಿಶ್ವದ ದೊಡ್ಡ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಈ ಸಲ ಪದಕಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಕ್ರೀಡಾಕೂಟಕ್ಕೆ ದಿನಗಣನೆಯ ಸಂಭ್ರಮ ಶುರುವಾದ ಹೊತ್ತಲ್ಲೇ, ಅಭಿಮಾನಿಗಳಿಗೆ ಬೇಸರದ ಸಂಗತಿಯೊಂದು ಎದುರಾಗಿದೆ.
ಪದಕ ನಿರೀಕ್ಷೆ ಇರುವ ಕ್ರೀಡೆಗಳಲ್ಲಿ ಶೂಟಿಂಗ್, ಟೆನ್ನಿಸ್, ಕುಸ್ತಿ ಸೇರಿದಂತೆ ಹಲವು ಕ್ರೀಡೆಗಳ ಜೊತೆಗೆ ಹಾಕಿ ಕೂಡ ಒಂದಾಗಿದೆ. ಕಳೆದ ಬಾರಿಯ ಟೋಕಿಯೋ ಒಲಿಂಪಿಕ್ನಲ್ಲಿ ಕಂಚಿನ ಪದಕ ಗೆದ್ದಿದ್ದ ತಂಡ ಈ ಬಾರಿ, ಚಿನ್ನದ ಸಾಧನೆ ಮಾಡುವ ಮಹದಾಸೆ ಹೊಂದಿದೆ. ಇಂತಿಪ್ಪ, ತಂಡದ ಭದ್ರಗೋಡೆ, ಅನುಭವಿ ಗೋಲ್ಕೀಪರ್, ಮಾಜಿ ನಾಯಕ ಪಿಆರ್ ಶ್ರೀಜೇಶ್ ದೊಡ್ಡ ಶಾಕ್ ನೀಡಿದ್ದಾರೆ. ಒಲಿಂಪಿಕ್ ಬಳಿಕ ಅವರು ಕ್ರೀಡೆಯಿಂದ ನಿವೃತ್ತಿ ಹೊಂದುವುದಾಗಿ ಸೋಮವಾರ ಘೋಷಿಸಿದ್ದಾರೆ.
As I stand on the threshold of my final chapter in international hockey, my heart swells with gratitude and reflection. This journey has been nothing short of extraordinary, and I am forever grateful for the love and support from my family, teammates, coaches, and fans. pic.twitter.com/MqxIuTalCY
— sreejesh p r (@16Sreejesh) July 22, 2024
ಸಾಮಾಜಿಕ ಜಾಲತಾಣದಲ್ಲಿ ಘೋಷಣೆ: ಈ ಬಗ್ಗೆ ಎಕ್ಸ್, ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿರುವ ಕೇರಳದ ಹಾಕಿ ಸ್ಟಾರ್ ಶ್ರೀಜೇಶ್, "ನಾನು ಅಂತಾರಾಷ್ಟ್ರೀಯ ಹಾಕಿಯಿಂದ ಹಿಂದೆ ಸರಿಯುವ ಹೊತ್ತಾಗಿದೆ. ನಾನು ಕ್ರೀಡೆ ಮತ್ತು ಬದುಕಿನ ಬಗ್ಗೆ ಹೆಮ್ಮೆ ಪಡುತ್ತೇನೆ. ಇಲ್ಲಿಯವರೆಗೂ ನನ್ನ ಪ್ರಯಾಣ ಉತ್ತಮವಾಗಿದೆ. ವೃತ್ತಿಜೀವನದ ಬಗ್ಗೆಯೂ ಹೆಮ್ಮೆ ಇದೆ. ಕ್ರೀಡೆ ಹೊರತಾಗಿ ಮುಂದಿನ ಜೀವನಕ್ಕೆ ಹೊರಳಬೇಕಿದೆ. ನನ್ನ ವೃತ್ತಿಜೀವನದಲ್ಲಿ ಬೆಂಬಲವಾಗಿ ನಿಂತ ನನ್ನ ಕುಟುಂಬ, ತಂಡದ ಸಹ ಆಟಗಾರರು, ಅಭಿಮಾನಿಗಳು, ಹಾಕಿ ಇಂಡಿಯಾದ ಪ್ರೀತಿಗೆ ನಾನು ಚಿರಋಣಿಯಾಗಿರುತ್ತೇನೆ. ನನ್ನ ಮೇಲೆ ಇಟ್ಟಿದ್ದ ನಂಬಿಕೆಗೆ ಧನ್ಯವಾದಗಳು. ಪ್ಯಾರಿಸ್ನಲ್ಲಿ ಪದಕದ ಬಣ್ಣವನ್ನು ಬದಲಿಸಲು ಶತಪ್ರಯತ್ನ ಮಾಡುವುದಾಗಿ" ತಿಳಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವೃತ್ತಿಜೀವನದ ಬಗ್ಗೆ ವಿವರವಾಗಿ ಬರೆದುಕೊಂಡಿರುವ ಶ್ರೀಜೇಶ್, ಜಿ. ವಿ. ರಾಜಾ ಸ್ಪೋರ್ಟ್ಸ್ ಸ್ಕೂಲ್‌ನಲ್ಲಿನ ವೃತ್ತಿಜೀವನದ ಆರಂಭದಿಂದ ಹಿಡಿದು ಇಲ್ಲಿಯವರೆಗಿನ ಪಯಣಕ್ಕೆ ಪ್ರತಿ ಹೆಜ್ಜೆ, ಕನಸು, ಆಶಯಗಳಿಗೆ ನನ್ನ ಪ್ರೀತಿಪಾತ್ರರು ಬೆಂಬಲವಾಗಿ ನಿಂತಿದ್ದಾರೆ.
ಆರಂಭಿಕ ದಿನಗಳ ಮೆಲುಕು: "ಮೊದಲ ಸ್ಪೋರ್ಟ್ಸ್ ಕಿಟ್ ಖರೀದಿಸಲು ನನ್ನ ತಂದೆ ಹಸು ಮಾರಾಟ ಮಾಡಿದ್ದು ನನಗೆ ಇನ್ನೂ ನೆನಪಿದೆ. ಅವರ ತ್ಯಾಗವು ನನ್ನೊಳಗೆ ಕಿಚ್ಚನ್ನು ಹೊತ್ತಿಸಿತು. ಕಷ್ಟಪಟ್ಟು ಶ್ರಮಿಸಲು, ದೊಡ್ಡ ಕನಸು ಕಾಣಲು ಪ್ರೇರೇಪಿಸಿತು. ವೃತ್ತಿಜೀವನದ ಮೊದಲ ವಿದೇಶ ಪ್ರವಾಸ ಆಸ್ಟ್ರೇಲಿಯಾ ಆಗಿತ್ತು. ಮೊದಲ ಅಂತಾರಾಷ್ಟ್ರೀಯ ಕೂಟದಲ್ಲಿ ಭಾಗಿಯಾಗಿದ್ದು ಬೆರಗು ಮತ್ತು ಉತ್ಸಾಹದಿಂದ ತುಂಬಿತ್ತು. ವಿದೇಶದ ನೆಲದಲ್ಲಿ ಸಾಮಾನ್ಯ ಯುವಕನೊಬ್ಬ ಕನಸು ಬೆನ್ನಟ್ಟಿದ್ದ.
2012 ರ ಲಂಡನ್ ಒಲಿಂಪಿಕ್ನಲ್ಲಿ ನಿರಾಸೆ ಕಾದಿತ್ತು. ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿದ್ದು, ಕಹಿ ಅನುಭವ. ಆದರೆ, ಅದು ಕೂಡ ಪಾಠವಾಗಿತ್ತು. ನನ್ನ ಸಂಕಲ್ಪಕ್ಕೆ ಏಣಿಯಾಗಿತ್ತು. ಏಷ್ಯನ್ ಚಾಂಪಿಯನ್ ಟ್ರೋಫಿ ಗೆದ್ದಿದ್ದು ಐತಿಹಾಸಿಕ ಮತ್ತು ಮರೆಯಲಾಗದ ಕ್ಷಣವಾಗಿದೆ. ಒಂದು ಟ್ರೋಫಿ ಗೆದ್ದ ಸಂಭ್ರಮ, ಇನ್ನೊಂದು ಪಾಕಿಸ್ತಾನವನ್ನು ಫೈನಲ್ನಲ್ಲಿ ಶೂಟೌಟ್ ಮೂಲಕ ಸೋಲಿಸಿದ ಹಿಗ್ಗು. ಚಾಂಪಿಯನ್ ತಂಡದ ನಾಯಕನಾದವನಿಗೆ ಮತ್ತು ಕ್ರೀಡೆಯನ್ನು ಪ್ರೀತಿಸುವ ಅಭಿಮಾನಿಗಳಿಗೆ ಇದಕ್ಕಿಂತ ಮತ್ತೇನು ಬೇಕು ಎಂದು ಅವರು ಸಂತಸವನ್ನು ಹಂಚಿಕೊಂಡಿದ್ದಾರೆ.
ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನ: 2020 ರ ಟೋಕಿಯೊ ಒಲಿಂಪಿಕ್ನಲ್ಲಿ ಕಂಚಿನ ಪದಕವನ್ನು ಗೆದ್ದಿರುವುದು ವೃತ್ತಿಜೀವನದ ದೊಡ್ಡ ಸಂಗತಿ. ಕಂಚಿನ ಪದಕ ಗೆದ್ದಿದ್ದು, ಕನಸು ನನಸಾದ ಕ್ಷಣ, ಕಣ್ಣೀರು, ಸಂತೋಷ, ಹೆಮ್ಮೆ ಎಲ್ಲವೂ ಮಿಳಿತವಾದ ಭಾಗ ಅದಾಗಿತ್ತು. ಪ್ಯಾರಿಸ್ನಲ್ಲಿ ನನ್ನ ಕೊನೆಯ ಆಟಕ್ಕೆ ಸಜ್ಜಾಗಿದ್ದೇನೆ. ಕ್ರೀಡಾಭಿಮಾನಿಗಳ ನಿರೀಕ್ಷೆಯನ್ನು ಹೊತ್ತಿದ್ದು, ಅವರ ನಂಬಿಕೆಯನುಸಾರ ವಾಪಸ್ ಬರುವ ಗುರಿ ಇದೆ. ನನ್ನ ಕ್ರೀಡಾ ಹಾದಿಯಲ್ಲಿ ಬೆಂಬಲಿಸಿದ ಎಲ್ಲರಿಗೆ ಧನ್ಯವಾದ ಎಂದು ಒಕ್ಕಣೆಯಲ್ಲಿ ಶ್ರೀಜೇಶ್ ತಿಳಿಸಿದ್ದಾರೆ.