ಹೈದರಾಬಾದ್: ಕ್ರಿಕೆಟ್ನಲ್ಲಿ ಅಂಪೈರಿಂಗ್ ವೃತ್ತಿ ಅತಿ ಕಷ್ಟಕರವಾದುದು. ಈಗಿನ ತಾಂತ್ರಿಕ ಯುಗದಲ್ಲಿ ಪ್ರತಿ ಹೆಜ್ಜೆಯೂ ವಿಶ್ಲೇಷಣೆಗೆ ಒಳಪಡಲಿದ್ದು, ಮೈದಾನದಲ್ಲಿ ನಿರ್ಣಯ ತೆಗೆದುಕೊಳ್ಳುವುದು ಸವಾಲಿನ ಸಂಗತಿ. ಈ ಎಲ್ಲಾ ಸವಾಲಿನ ನಡುವೆ ಭಾರತದ ಅಂಪೈರ್ ನಿತಿನ್ ಮೆನನ್ ಅವರು ವಿಶಿಷ್ಟ ದಾಖಲೆ ಮಾಡಿದ್ದಾರೆ.
ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ) ಎಲೈಟ್ ಪ್ಯಾನೆಲ್ ಅಂಪೈರ್ಸ್ ಪಟ್ಟಿಯಲ್ಲಿರುವ ಭಾರತದ ಏಕೈಕ ತೀರ್ಪುಗಾರರಾಗಿರುವ ನಿತಿನ್ ಮೆನನ್ ಅವರು ಅತಿ ಹೆಚ್ಚು ಪಂದ್ಯಗಳಲ್ಲಿ ಮೈದಾನದ ಅಂಪೈರ್ (ಫೀಲ್ಡ್ ಅಂಪೈರಿಂಗ್) ಆಗಿ ಕೆಲಸ ಮಾಡಿದ ಮೊದಲ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಸಾರಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನ ಅಸ್ಟ್ರೇಲಿಯಾ ಮತ್ತು ನಮೀಬಿಯಾ ನಡುವೆ ಜೂನ್ 11 ರಂದು ನಡೆದ ಪಂದ್ಯದಲ್ಲಿ ಅಂಪೈರಿಂಗ್ ಮಾಡುವ ಮೂಲಕ ಅವರು ಈ ಸಾಧನೆ ಮಾಡಿದರು. ನಿತಿನ್ ಮೆನನ್ ಅವರು ಈವರೆಗೆ 126 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೈದಾನದ ಅಂಪೈರ್ ಆಗಿ ತೀರ್ಪು ನೀಡಿದ್ದಾರೆ. ಈ ಮೂಲಕ ಭಾರತದ ಅನುಭವಿ ಅಂಪೈರ್ ಶ್ರೀನಿವಾಸ್ ವೆಂಕಟರಾಘವನ್ ಅವರ 20 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದರು. ವೆಂಕಟರಾಘವನ್ ಅವರು 125 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದರು.
ಮೆನನ್ ಅಂಪೈರಿಂಗ್ ಹೀಗಿದೆ: ನಿತಿನ್ ಮೆನನ್ ಅವರು ಇಲ್ಲಿಯವರೆಗೆ 23 ಟೆಸ್ಟ್‌ಗಳು, 58 ಏಕದಿನಗಳು ಮತ್ತು 45 ಟಿ20 ಸೇರಿ ಒಟ್ಟು 126 ಪಂದ್ಯಗಳಲ್ಲಿ ಆನ್-ಫೀಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದರ ಜೊತೆಗೆ ಆರು ಟೆಸ್ಟ್‌ಗಳು, 14 ಏಕದಿನಗಳು ಮತ್ತು 24 ಟಿ20 ಪಂದ್ಯಗಳಲ್ಲಿ (ಒಟ್ಟು 44) ಟಿವಿ ಅಂಪೈರ್ ಆಗಿಯೂ ಕೆಲಸ ಮಾಡಿದ್ದಾರೆ.
ವೆಂಕಟರಾಘವನ್ ಅವರು ಆನ್-ಫೀಲ್ಡ್ ಅಂಪೈರ್ ಆಗಿ 73 ಟೆಸ್ಟ್ ಮತ್ತು 52 ಏಕದಿನ ಪಂದ್ಯಗಳಲ್ಲಿ (125 ಪಂದ್ಯಗಳು) ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಆಗ ಟಿ20 ಕ್ರಿಕೆಟ್ ಅಸ್ತಿತ್ವದಲ್ಲಿ ಇರಲಿಲ್ಲ. ಜೊತೆಗೆ 8 ಏಕದಿನ ಮತ್ತು ಐದು ಟೆಸ್ಟ್‌ಗಳಲ್ಲಿ ರೆಫರಿಯಾಗಿ ಕೆಲಸ ಮಾಡಿದ್ದಲ್ಲದೇ, 18 ಏಕದಿನ ಮತ್ತು ಒಂದು ಟೆಸ್ಟ್‌ನಲ್ಲಿ ಟಿವಿ ಅಂಪೈರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.
ಏಕೈಕ ಎಲೈಟ್ ಪ್ಯಾನೆಲ್ ಅಂಪೈರ್: ಮಧ್ಯಪ್ರದೇಶದ ಇಂದೋರ್‌ನ 40 ವರ್ಷದ ಮೆನನ್ ಅವರು ಪ್ರಸ್ತುತ ಟಿ20 ವಿಶ್ವಕಪ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಐಸಿಸಿ ಎಲೈಟ್ ಪ್ಯಾನೆಲ್‌ನಲ್ಲಿ ಭಾರತದ ಏಕೈಕ ಅಂಪೈರ್ ಆಗಿದ್ದಾರೆ. 2020 ರಲ್ಲಿ ಅವರು ಎಲೈಟ್ ಪ್ಯಾನೆಲ್‌ನಲ್ಲಿ ಸ್ಥಾನ ಪಡೆದರು. ಅನೇಕ ಹೈವೋಲ್ಟೇಜ್ ಪಂದ್ಯಗಳು, ಸರಣಿಗಳು ಮತ್ತು ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ಮೈದಾನದ ಅಂಪೈರ್ ಆಗಿದ್ದಾರೆ. 2023 ರಲ್ಲಿ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆದ ಮೂರನೇ ಆಶಸ್ ಟೆಸ್ಟ್‌ಗೂ ಅಂಪೈರಿಂಗ್ ಮಾಡಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್ ರೋಚಕ ಸೂಪರ್-8; ಭಾರತದ ಎದುರಾಳಿಗಳ್ಯಾರು? ಪಂದ್ಯಗಳು ಯಾವಾಗ? - T20 World Cup Super Eight