ನವದೆಹಲಿ: ಸಿರಿವಂತ ಕ್ರೀಡಾಕೂಟ, ಹೊಸ ಪ್ರತಿಭೆಗಳನ್ನು ಶೋಧಿಸುವ ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ಆಯ್ಕೆ ಮಾಡಲಾಗಿದ್ದು, ಅದಕ್ಕೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಮುಂಬೈ ತಂಡದ ಮಾಜಿ ನಾಯಕ, ತಂಡಕ್ಕೆ 5 ಬಾರಿ ಕಪ್ ತಂದುಕೊಟ್ಟ ರೋಹಿತ್ ಶರ್ಮಾ ಅವರನ್ನು ಪರಿಗಣಿಸಲಾಗಿಲ್ಲ.
ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಂ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಮ್ಯಾಥ್ಯೂ ಹೇಡನ್, ಟಾಮ್ ಮೂಡಿ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ ಸೇರಿದಂತೆ ಮಾಜಿ ಕ್ರಿಕೆಟಿಗರಿಂದ ಈ ತಂಡವನ್ನು ಪ್ರಕಟಿಸಲಾಗಿದೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧ ಶತಕ ಸಿಡಿಸಿದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿಯನ್ನು ಆರಂಭಿಕರನ್ನಾಗಿ ಪರಿಗಣಿಸಲಾಗಿದೆ. ಬ್ಯಾಕ್ ಅಪ್ ಓಪನರ್ ಆಗಿ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಇದ್ದಾರೆ. 'ಮಿಸ್ಟರ್ ಐಪಿಎಲ್' ಎಂದೇ ಹೆಸರಾದ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಒಮ್ಮತದಿಂದ ಆಯ್ಕೆಯಾಗಿದ್ದಾರೆ.
360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್, ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದಲ್ಲಿದ್ದರೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಕೀರಾನ್ ಪೊಲಾರ್ಡ್ 15 ಸದಸ್ಯರ ತಂಡದಲ್ಲಿ ಆಲ್ರೌಂಡರ್ಗಳಾಗಿದ್ದಾರೆ. ರಶೀದ್ ಖಾನ್, ಸುನಿಲ್ ನರೈನ್ ಮತ್ತು ಯಜುವೇಂದ್ರ ಚಹಲ್ ಸ್ಪಿನ್ನರ್ಗಳಾಗಿದ್ದರೆ, ಲಸಿತ್ ಮಾಲಿಂಗ ಮತ್ತು ಜಸ್ಪ್ರೀತ್ ಬುಮ್ರಾ ವೇಗದ ಬೌಲರ್‌ಗಳ ಸ್ಥಾನಗಳಿಗೆ ಆಯ್ಕೆಯಾಗಿದ್ದಾರೆ.
ಧೋನಿ ನಾಯಕ, ರೋಹಿತ್ ಮಿಸ್: ಭಾರತ ಕಂಡ ಅತಿ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಶ್ರೇಷ್ಠ ತಂಡದ ನಾಯಕರನ್ನಾಗಿ ಸೂಚಿಸಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿರುವ ಧೋನಿ ತಂಡಕ್ಕೆ ಐದು ಬಾರಿ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಆದರೆ, ಇಷ್ಟೇ ಟ್ರೋಫಿಗಳನ್ನು ಮುಂಬೈ ಇಂಡಿಯನ್ಸ್ ತಂಡದ ಮುಡಿಗೇರಿಸಿರುವ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ತಂಡದಲ್ಲಿ ಆಯ್ಕೆ ಮಾಡದೇ ಇರುವುದು ಅಚ್ಚರಿ ಮೂಡಿಸಿದೆ.
ರೋಹಿತ್ ಈವರೆಗೂ ಮುಂಬೈ ತಂಡ ಕಂಡ ಯಶಸ್ವಿ ನಾಯಕ. ಐದು ಬಾರಿ ಕಪ್ ಗೆದ್ದ ತಂಡದ ನಾಯಕರಾಗಿದ್ದಾರೆ. ಐಪಿಎಲ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲೂ ಇದ್ದಾರೆ. ಆದಾಗ್ಯೂ ಮಾಜಿ ಕ್ರಿಕೆಟಿಗರು ಹಿಟ್ಮ್ಯಾನ್ಗೆ ಮಣೆ ಹಾಕಿಲ್ಲ.
ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಇಂತಿದೆ: ಎಂಎಸ್ ಧೋನಿ (ನಾಯಕ), ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಡೇವಿಡ್ ವಾರ್ನರ್, ಸುರೇಶ್ ರೈನಾ, ಎಬಿ ಡಿವಿಲಿಯರ್ಸ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕೀರಾನ್ ಪೊಲಾರ್ಡ್, ರಶೀದ್ ಖಾನ್, ಸುನಿಲ್ ನರೈನ್, ಯಜುವೇಂದ್ರ ಚಹಲ್, ಲಸಿತ್ ಮಾಲಿಂಗ ಮತ್ತು ಜಸ್ಪ್ರೀತ್ ಬುಮ್ರಾ.
ಇದನ್ನೂ ಓದಿ: ಜೈಸ್ವಾಲ್, ಸರ್ಫರಾಜ್, ಧ್ರುವ ಜುರೆಲ್ ಆಟ ಮೆಚ್ಚಿದ ರೋಹಿತ್ ಶರ್ಮಾ