ಬೆಂಗಳೂರು: ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮುಖ್ಯ ತರಬೇತುದಾರರಾಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಕ್ಲಿಂಗರ್ ನೇಮಕಗೊಂಡಿದ್ದಾರೆ.
ಮೊದಲ ಆವೃತ್ತಿಯಿಂದ ಗುಜರಾತ್ ಜೈಂಟ್ಸ್ ತಂಡದ ಮಾರ್ಗದರ್ಶಕಿ ಹಾಗೂ ಸಲಹಗಾರ್ತಿಯಾಗಿರುವ ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್, ಹಾಗೂ ಬೌಲಿಂಗ್ ಕೋಚ್ ಆಗಿರುವ ನೂಶಿನ್ ಅಲ್ ಖದೀರ್ ಜೊತೆ ಮೈಕೆಲ್ ಕ್ಲಿಂಗರ್ ತಂಡವನ್ನು ಸೇರಿದ್ದಾರೆ. ಬೆಂಗಳೂರು ಹಾಗೂ ನವದೆಹಲಿಯಲ್ಲಿ ನಡೆಯಲಿರುವ ಟೂರ್ನಿಗೆ ಫೆಬ್ರವರಿ 23ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ.
ಪುರುಷರ BBLನ ದಿಗ್ಗಜ ಆಟಗಾರರಲ್ಲಿ ಓರ್ವರಾಗಿರುವ ಕ್ಲಿಂಗರ್, 2019ರಲ್ಲಿ ನಿವೃತ್ತರಾದರು. ಇತ್ತೀಚಿಗೆ ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL)ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಸಿಡ್ನಿ ಥಂಡರ್‌ಗೆ ಸಹಾಯಕ ತರಬೇತುದಾರರಾಗಿ ಸೇವೆ ಸಲ್ಲಿಸಿರುವ ಅವರು, 2019 ರಿಂದ 2021ರ ವರೆಗೆ ಮೆಲ್ಬೋರ್ನ್ ರೆನೆಗೇಡ್ಸ್ ಪುರುಷರ ತಂಡದ ಮುಖ್ಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕ್ರಿಕೆಟ್‌ನ ವಿವಿಧ ವಿಧಗಳಲ್ಲಿನ ಅವರ ಅನುಭವವು ತಂಡಕ್ಕೆ ವರದಾನವಾಗಲಿದೆ.
ಗುಜರಾತ್ ತಂಡದ ಮುಖ್ಯ ಕೋಚ್ ಹುದ್ದೆಗೆ ನೇಮಕವಾದ ಬಳಿಕ ಮಾತನಾಡಿದ ಮೈಕೆಲ್ ಕ್ಲಿಂಗರ್, ''WPL ಸೀಸನ್ 2 ವಿಶೇಷವಾದ ಸಾಧನೆಗೈಯುವ ಅವಕಾಶ ಗುಜರಾತ್ ಜೈಂಟ್ಸ್ ತಂಡಕ್ಕಿದೆ. ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಮಹತ್ವದ ಪರಿವರ್ತನೆಯಲ್ಲಿ ಪಾತ್ರವನ್ನು ವಹಿಸಿರುವ ಮಿಥಾಲಿ ರಾಜ್‌ರಂಥಹ ದಿಗ್ಗಜ ಆಟಗಾರ್ತಿಯೊಂದಿಗೆ ಕೆಲಸ ಮಾಡಲು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಅದಾನಿ ಸ್ಪೋರ್ಟ್ಸ್‌ಲೈನ್ ಕುಟುಂಬ, ಮಿಥಾಲಿ ರಾಜ್ ಮತ್ತು ತಂಡದ ಇತರರೊಂದಿಗೆ, ನಾನು ತಂಡವನ್ನು ಫೈನಲ್ ಸುತ್ತಿಗೆ ಕೊಂಡೊಯ್ಯಲು ಆಶಿಸುತ್ತೇನೆ'' ಎಂದರು.
ಕ್ಲಿಂಗರ್ ಅವರ ನೇಮಕಾತಿಯನ್ನು ಶ್ಲಾಘಿಸಿದ ತಂಡದ ಮಾರ್ಗದರ್ಶಕಿ ಮತ್ತು ಸಲಹೆಗಾರ್ತಿ ಮಿಥಾಲಿ ರಾಜ್ ''ಮೈಕೆಲ್ ಅವರೊಂದಿಗೆ ಕೆಲಸ ಮಾಡುವುದರಿಂದ ಗುಜರಾತ್ ಜೈಂಟ್ಸ್ ಆಟಗಾರರಲ್ಲಿನ ಅತ್ಯುತ್ತಮ ಪ್ರದರ್ಶನ ಹೊರತರಲು ಸಹಾಯ ಮಾಡುತ್ತದೆ. ಅವರ ಅನುಭವ ನಮ್ಮ ತಂಡದ ಕೆಲವು ಕಿರಿಯ ಸದಸ್ಯರಿಗೆ ಖಂಡಿತವಾಗಿಯೂ ಪ್ರಯೋಜನವನ್ನು ನೀಡಲಿದೆ. ತಂಡದಲ್ಲಿ ಕ್ಲಿಂಗರ್ ಹೊಂದಲು ನಾವು ಎದುರು ನೋಡುತ್ತೇವೆ. ಅವರು ಮುಖ್ಯ ಕೋಚ್ ಆಗಿದ್ದರಿಂದ ತಂಡ ಯಶಸ್ಸು ಗಳಿಸುತ್ತದೆ ವಿಶ್ವಾಸ ನಮಗೆ ಇದೆ'' ಎಂದರು.
ಅದಾನಿ ಸ್ಪೋರ್ಟ್ಸ್‌ಲೈನ್‌ನ ಸಿಇಓ ಸಂಜಯ್ ಅಡೇಸಾರ ಮಾತನಾಡಿ ''ಗುಜರಾತ್ ಜೈಂಟ್ಸ್ ಮತ್ತು ಅದಾನಿ ಸ್ಪೋರ್ಟ್ಸ್‌ಲೈನ್ ಕುಟುಂಬಕ್ಕೆ ಮೈಕೆಲ್ ಕ್ಲಿಂಗರ್ ಅತ್ಯಂತ ಯೋಗ್ಯರಾಗಿದ್ದಾರೆ. ಕೋಚ್ ಮತ್ತು ಆಟಗಾರರಾಗಿ ಅವರು BBLನಲ್ಲಿ ಉತ್ತಮ ಫಲಿತಾಂಶ ಹೊಂದಿದ್ದಾರೆ. WPLನ ಮುಂಬರುವ ಋತುವಿನಲ್ಲಿ ಮತ್ತು ಭವಿಷ್ಯದಲ್ಲಿ ಇದು ಖಂಡಿತವಾಗಿಯೂ ನಮ್ಮ ತಂಡಕ್ಕೆ ಸಹಾಯ ಮಾಡಲಿದೆ'' ಎಂದಿದ್ದಾರೆ.
ಫೆಬ್ರವರಿ 25 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿರುವ ಗುಜರಾತ್ ಜೈಂಟ್ಸ್, ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ: ಮೂರನೇ ಟೆಸ್ಟ್ಗೆ ವಿರಾಟ್ ಬರುವರೇ?: ದ್ರಾವಿಡ್ ಹೀಗೇಕೆ ಹೇಳಿದ್ರು!?