ಪ್ಯಾರಿಸ್ (ಫ್ರಾನ್ಸ್): ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಶೂಟಿಂಗ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಒಲಿಂಪಿಕ್ ಆವೃತ್ತಿವೊಂದರಲ್ಲೇ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ದಾಖಲೆ ಬರೆದಿದ್ದಾರೆ. ಇಂದು ನಡೆದ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಇದಕ್ಕೂ ಮುನ್ನ ಭಾನುವಾರ ನಡೆದಿದ್ದ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲೂ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ 12 ವರ್ಷಗಳ ನಂತರ ಭಾರತ ಶೂಟಿಂಗ್‌ನಲ್ಲಿ ಪದಕ ಪಡೆದಿತ್ತು.
ಇದೀಗ ಮನು ಅವರು ಪಿವಿ ಸಿಂಧು ನಂತರ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಎರಡನೇ ಭಾರತೀಯ ಮಹಿಳೆಯಾಗಿದ್ದಾರೆ. ಕಳೆದ ಟೋಕಿಯೋ ಒಲಿಂಪಿಕ್ನಲ್ಲಿ ಪಿಸ್ತೂಲ್ ಅಸಮರ್ಪಕ ಕಾರ್ಯದಿಂದಾಗಿ ಮನು ಕ್ರೀಡೆಯಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಆದರೆ ಭಾರತದಿಂದ ಪದಕವನ್ನು ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಈ ಬಾರಿಯ ಒಲಿಂಪಿಕ್ಗೆ ಮತ್ತೆ ಅರ್ಹತೆ ಪಡೆದ ಶೂಟರ್ ಮನು ಎರಡು ಪದಕಗಳನ್ನು ಜಯಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸಿದ್ದಾರೆ.
22 ವರ್ಷದ ಹರಿಯಾಣದ ಶೂಟರ್ ಮನು ಭಾಕರ್ ಕ್ರೀಡಾಕೂಟದ ಒಲಿಂಪಿಕ್ ಒಂದರಲ್ಲೇ ಭಾರತಕ್ಕೆ ಎರಡು ಪದಕಗಳನ್ನು ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಾರ್ಮನ್ ಪ್ರಿಚರ್ಡ್ ಈ ಹಿಂದೆ 1900ರ ಒಲಿಂಪಿಕ್ನಲ್ಲಿ 200 ಮೀಟರ್ ಸ್ಪ್ರಿಂಟ್ ಮತ್ತು 200 ಮೀಟರ್ ಹರ್ಡಲ್ಸ್‌ನಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದರೂ, ಈ ಸಾಧನೆಯು ಸ್ವಾತಂತ್ರ್ಯ ಪೂರ್ವದಲ್ಲಾಗಿತ್ತು.
12 ವರ್ಷಗಳ ಕಾಯುವಿಕೆ ಅಂತ್ಯ: ಭಾರತ ಕೊನೆಯದಾಗಿ 2012ರ ಲಂಡನ್ ಒಲಿಂಪಿಕ್ನಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದಿತ್ತು. ರಾಪಿಡ್ ಫೈರ್ ಪಿಸ್ತೂಲ್ ಶೂಟರ್ ವಿಜಯ್ ಕುಮಾರ್ ಮತ್ತು ಗುರಿಕಾರ ಗಗನ್ ನಾರಂಗ್ ಕಂಚಿನ ಪದಕ ಗೆದ್ದಿದ್ದರು. ಕಳೆದ ಎರಡು ಒಲಿಂಪಿಕ್ ಸೀಸನ್‌ಗಳಲ್ಲಿ ಶೂಟಿಂಗ್‌ನಲ್ಲಿ ಭಾರತಕ್ಕೆ ಯಾವುದೇ ಪದಕಗಳು ಬಂದಿರಲಿಲ್ಲ.
ಈ ಹಿಂದೆ ಭಾರತದ ಶೂಟರ್ಗಳಾದ ರಾಜ್ಯವರ್ಧನ್ ಸಿಂಗ್ ರಾಥೋಡ್ (ಅಥೆನ್ಸ್ 2004), ಅಭಿನವ್ ಬಿಂದ್ರಾ (ಬೀಜಿಂಗ್ 2008), ವಿಜಯ್ ಕುಮಾರ್ (ಲಂಡನ್ 2012), ಗಗನ್ ನಾರಂಗ್ (ಲಂಡನ್ 2012), ಒಲಿಂಪಿಕ್ನಲ್ಲಿ ಪದಕ ಗೆದ್ದಿದ್ದರು.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್: ಟೇಬಲ್ ಟೆನ್ನಿಸ್ನಲ್ಲಿ ಇತಿಹಾಸ ಸೃಷ್ಟಿಸಿದ ಮಣಿಕಾ ಬಾತ್ರಾ! - Manika Batra