ಮುಂಬೈ (ಮಹಾರಾಷ್ಟ್ರ): ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಪ್ರತಿಮೆ ಸ್ಥಾಪಿಸುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಮುಂಬೈನ ಶಿವಾಜಿ ಪಾರ್ಕ್ನ ಗೇಟ್ ನಂ.5ರ ಬಳಿ ಪ್ರತಿಮೆ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ವಿ ಕಾಮತ್ ಮೆಮೋರಿಯಲ್ ಕ್ರಿಕೆಟ್ ಕ್ಲಬ್ ಪ್ರತಿಮೆ ಸ್ಥಾಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಆದರೆ ನಿರ್ವಹಣಾ ವೆಚ್ಚವನ್ನು ಸರ್ಕಾರ ಭರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮುಂಬೈನ ಗಾರ್ಡಿಯನ್ ಮಿನಿಸ್ಟರ್ ನೇತೃತ್ವದ ಸಮಿತಿಯು ಸ್ಮಾರಕ ನಿರ್ಮಾಣಕ್ಕೆ ಶಿಫಾರಸು ಮಾಡಿತ್ತು. ಈ ಸ್ಮಾರಕದ ನಿರ್ಮಾಣವನ್ನು ಸಕಾಲದಲ್ಲಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಜಿಎಂ) ಆಯುಕ್ತರು ವಹಿಸಲಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರಕ್ಕೆ ಸಚಿನ್ ತೆಂಡೂಲ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ. 'ನಾನು ಸೇರಿದಂತೆ ಹಲವು ಕ್ರಿಕೆಟಿಗರ ಜೀವನದ ಮೇಲೆ ಅಚ್ರೇಕರ್ ಸರ್ ಅಗಾಧ ಪ್ರಭಾವ ಬೀರಿದ್ದಾರೆ. ಅವರ ಬಳಿ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಅಚ್ರೇಕರ್ ಅವರ ಜೀವನವು ಶಿವಾಜಿ ಪಾರ್ಕ್‌ನಲ್ಲಿ ಕ್ರಿಕೆಟ್‌ನ ಸುತ್ತ ಸುತ್ತುತ್ತದೆ. ಆ ಉದ್ಯಾನವನದಲ್ಲಿ ಶಾಶ್ವತವಾಗಿ ಉಳಿಯಬೇಕೆಂಬುದು ಅವರ ಮಹದಾಸೆಯಾಗಿತ್ತು. ಅಚ್ರೇಕರ್ ಸರ್ ತರಬೇತಿ ನೀಡುತ್ತಿದ್ದ ಸ್ಥಳದಲ್ಲಿಯೇ ಅವರ ಪ್ರತಿಮೆಯನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದು ಸಚಿನ್ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
Achrekar Sir has had an immense impact on my life and several other lives. I am speaking on behalf of all his students.
— Sachin Tendulkar (@sachin_rt) August 29, 2024
His life revolved around cricket in Shivaji Park. Being at Shivaji Park forever is what he would have wished for.
I am very happy with the government’s… pic.twitter.com/NIyVeYOy56
ರಮಾಕಾಂತ್ ಅಚ್ರೇಕರ್ ಅವರ ಪುತ್ರಿ ವಿಶಾಖಾ ಅಚ್ರೇಕರ್-ದಳವಿ ಈಟಿವಿ ಭಾರತ್‌ದ ನಿಖಿಲ್ ಬಾಪಟ್ ಜೊತೆ ದೂರವಾಣಿ ಮೂಲಕ ಮಾತನಾಡಿ, "ನನ್ನ ತಂದೆ ತಮ್ಮ ಇಡೀ ಜೀವನವನ್ನು ಶಿವಾಜಿ ಪಾರ್ಕ್‌ನಲ್ಲಿ ಕಳೆದಿದ್ದರು. ಬೆಳಗ್ಗೆ 4 ಗಂಟೆಗೆ ಅವರು ಮೈದಾನಕ್ಕೆ ಹೋಗುತ್ತಿದ್ದರು. ಅವರು ತಮ್ಮ ಇಡೀ ಜೀವನವನ್ನು ಕ್ರಿಕೆಟ್‌ಗೆ ಮೀಸಲಿಟ್ಟಿದ್ದರು. ಇದೀಗ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿರುವುದು ತುಂಬಾ ಸಂತೋಷದಾಯಕವಾಗಿದೆ ಎಂದು ತಿಳಿಸಿದ್ದಾರೆ.
ಅಚ್ರೇಕರ್ ಅವರಲ್ಲಿ ತರಬೇತಿ ಪಡೆದ ಆಟಗಾರರಲ್ಲಿ ಕೆಲ ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಪ್ರವೀಣ್ ಆಮ್ರೆ, ವಿನೋದ್ ಕಾಂಬ್ಳೆ ಮತ್ತು ಚಂದ್ರಕಾಂತ್ ಪಂಡಿತ್ ಅವರಂತಹ ಆಟಗಾರರು ಸೇರಿದ್ದಾರೆ. ಇದೀಗ ಮಹಾರಾಷ್ಟ್ರ ಸರ್ಕಾರ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ತರಬೇತುದಾರರ ಸ್ಮರಣಾರ್ಥ ಸ್ಮಾರಕ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಅತ್ಯುತ್ತಮ ತರಬೇತುದಾರರಲ್ಲಿ ಒಬ್ಬರಾದ ಅಚ್ರೇಕರ್ ಜನವರಿ 2, 2019 ರಂದು ಮುಂಬೈನಲ್ಲಿ ನಿಧನ ಹೊಂದಿದರು.