ಹೈದರಾಬಾದ್ (ತೆಲಂಗಾಣ): 2024ರ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಸಾಮಾನ್ಯ ಜನರೊಂದಿಗೆ ಭಾರತೀಯ ಕ್ರೀಡಾ ತಾರೆಯರು ಕೂಡ ತಮ್ಮ ಮನೆಯಿಂದ ಹೊರಬಂದು ಮತ ಚಲಾಯಿಸಿದರು. ಭಾರತದ ಶಟ್ಲರ್ ಜ್ವಾಲಾ ಗುಟ್ಟಾ ಅವರು ಹೈದರಾಬಾದ್‌ನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಇದರೊಂದಿಗೆ ಮನೆಯಿಂದ ಹೊರಗೆ ಬಂದು ಮತದಾನ ಮಾಡುವಂತೆ ಮನವಿ ಮಾಡಿದರು.
ಮತದಾನ ಮಾಡಿದ ಬಳಿಕ ಮಾತನಾಡಿದ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ, ಮತದಾನ ನಮ್ಮ ಹಕ್ಕು. ಜನರು ಬಂದು ಮತ ಹಾಕಬೇಕು. ನಾವು ನಿಮ್ಮನ್ನು ಅಧಿಕಾರಕ್ಕೆ ತರಬಹುದು ಮತ್ತು ನೀವು ಸರಿಯಾದ ಕೆಲಸ ಮಾಡದಿದ್ದರೆ ದೇಶ ಮತ್ತು ಸಮಾಜವು ನಿಮ್ಮನ್ನು ಕೆಳಗಿಳಿಸಬಹುದು ಎಂಬ ಸಂದೇಶವೂ ಇದು ಅಧಿಕಾರದಲ್ಲಿರುವ ಜನರಿಗೆ ಮುಟ್ಟುತ್ತದೆ ಎಂದರು.
ಇದಲ್ಲದೇ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕುಟುಂಬ ಕೂಡ ಹೈದರಾಬಾದ್‌ನಲ್ಲಿ ಮತದಾನ ಮಾಡಿದೆ. ಅವರ ತಂದೆ, ಮತದಾನ ಕೇವಲ ಹಕ್ಕು ಮಾತ್ರವಲ್ಲ ಕರ್ತವ್ಯವೂ ಹೌದು. ದೇಶದ ಅಭಿವೃದ್ಧಿಯಲ್ಲಿ ಜನರು ಪಾಲ್ಗೊಳ್ಳಬೇಕು ಮತ್ತು ಇದು ಮತದಾನದಿಂದ ಮಾತ್ರ ಸಾಧ್ಯ ಎಂಬ ಸಂದೇಶ ನೀಡಿದರು.
ಇದಲ್ಲದೇ, ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕೂಡ ಹೈದರಾಬಾದ್‌ನಲ್ಲಿ ತಮ್ಮ ಪುತ್ರನೊಂದಿಗೆ ಮತದಾನ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ ಅವರು, ಇಂದು ತಮ್ಮ ಪುತ್ರ ಅಬ್ಬಾಸ್ ಜೊತೆ ತೆಲಂಗಾಣದಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ನಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಪ್ರತಿಯೊಂದು ಮತವೂ ಮುಖ್ಯವಾಗಿದೆ.
ಜ್ವಾಲಾ ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಪದಕಗಳನ್ನು ಗೆದ್ದಿದ್ದಾರೆ. ಮಿನಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್, ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್, ಡಬಲ್ಸ್ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಮತ್ತು ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಅನ್ನು ಜ್ವಾಲಾ ಗೆದ್ದಿದ್ದಾರೆ. 2010 ರಲ್ಲಿ ಜ್ವಾಲಾ ಗುಟ್ಟಾ - ಅಶ್ವಿನಿ ಪೊನ್ನಪ್ಪ ಅವರೊಂದಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದಿದ್ದರು.